February 14th : ಅಮರ ಪ್ರೇಮದ ಮಧುರಗಾಥೆ….!

ರೋಮ್ ನ ಮಹಾಚಕ್ರವರ್ತಿ ಕ್ಲಾಡಿಯಸ್-II (Claudius-ll) ತನ್ನ ರಾಜ್ಯಭಾರದಲ್ಲಿ ಸೈನಿಕರು ಯಾವುದೇ ಕಾರಣಕ್ಕೂ ಸ್ತ್ರೀ ಸಂಪರ್ಕಕ್ಕೆ ಬರದಂತೆಯೂ, ಮುಂದುವರೆದು,

ಸೈನಿಕರು ಮದುವೆಯಾಗುವುದನ್ನೇ ನಿರ್ಬಂಧಿಸಿದ್ದನು. ರಾಜನ ಇಂತಹ ಅನರ್ಥಕಾರಿ ಆಜ್ಞೆಯ ವಿರುದ್ಧ ದನಿಯೆತ್ತಿದ ಸಂತ ವ್ಯಾಲಂಟೈನ್ (Saint Valentine) ರಹಸ್ಯವಾಗಿ ಸಾಮ್ರಾಜ್ಯದ ಸೈನಿಕರಿಗೆ ಮದುವೆ ಮಾಡಿಸಿಬಿಟ್ಟ. ಗುಟ್ಟು ತಿಳಿದ ಸರ್ವಾಧಿಕಾರಿ ಕ್ಲಾಡಿಯಸ್ ವ್ಯಾಲೆಂಟೈನ್ ನನ್ನು ಸೆರೆಗೆ ತಳ್ಳಿ ಫೆಬ್ರವರಿ 14 ರಂದು ಗಲ್ಲಿಗೇರಿಸಿದನೆಂದೂ, ತಮ್ಮ ಪ್ರೀತಿ ಮತ್ತು ಬದುಕಿನ ಕಾರಣಕ್ಕಾದ ಮಹಾಸಂತನ ಈ ಬಲಿದಾನವನ್ನು ಅಮರವಾಗಿಸಲು ನಿರ್ಧರಿಸಿದ ರೋಮನ್ನರು ಪ್ರತಿ ಫೆಬ್ರವರಿಯ 14 ನ್ನು ಪ್ರೀತಿ ಮತ್ತು ತ್ಯಾಗಗಳ ಅಮರತ್ವದ ಸಾಂಕೇತಿಕ ಸಂಭ್ರಮವಾಗಿ ಆಚರಿಸತೊಡಗಿದರು. ಗಾಳಿ, ಬೆಳಕುಗಳಂತೆ ಪ್ರೀತಿಯೂ ಸರ್ವವ್ಯಾಪಿಯಲ್ಲವೆ; ಇಡೀ ಜಗತ್ತೇ ಇಂದು ಫೆಬ್ರವರಿ 14 ನ್ನು ವ್ಯಾಲೆಂಟೈನ್ಸ್ ಡೇ (Valentine’s Day) ಯಾಗಿ ಪ್ರೀತಿಗಾಗಿಯೆ ಮೀಸಲಿಟ್ಟು ಆಚರಿಸತೊಡಗಿದೆ.

ಈ ಪ್ರೇಮಿಗಳ ದಿನದ ನೆವದಲ್ಲಿ ಪ್ರೀತಿ, ಪ್ರೇಮ, ಕಾಳಜಿ, ಸೌಜನ್ಯ ಹಾಗೂ ತ್ಯಾಗಗಳಿಗೆ ಹೆಸರಾದ ನಮ್ಮ ಕಾಲದ ಮಹಾಪ್ರೇಮಿಗಳಿಬ್ಬರನ್ನು ನೆನೆಯೋಣ ಬನ್ನಿ. ಅವರೀರ್ವರೂ ವಿವಾಹವಾದಾಗ ಇನ್ನೂ ಎಳೆಯ ಪ್ರಾಯದ ಮುಗ್ಧ ಮನಸ್ಸಿನವರು. ಈ ಸಮಾಜದ ಶ್ರೇಣೀಕೃತ ಅಭ್ಯಾಸದಂತೆ ತಳವರ್ಗದ ಹುಟ್ಟು ಮತ್ತು ಬದುಕುಗಳನ್ನು ಹೊದ್ದವರು. ಮಹಾ ಕನಸಿನ, ಮಹೋನ್ನತ ಅಭಿಲಾಷೆಗಳ ಸಾಕಾರಕ್ಕಾಗಿ ದಣಿವರಿಯದ ಶ್ರಮ ವಹಿಸುವ ಪತಿಯ ಕುರಿತಾಗಿ ಈ ಹೆಣ್ಮಗಳಿಗೆ ಇನ್ನಿಲದ ಅಭಿಮಾನ, ಪ್ರೀತಿ ಮತ್ತು ಕಾಳಜಿ. ತನ್ನ ಸುತ್ತಲ ಪರಿಸರವನ್ನು ತನ್ಮೂಲಕ ಈ ನೆಲದ ಬೇರುಗಳಿಗಂಟಿದ ಮಹಾಮೌಢ್ಯದ ಕೊಳೆಯನ್ನು ತೊಲಗಿಸಲು ಅಚಲವಾಗಿ ನಿಂತ ತನ್ನ ಸಂಗಾತಿಯ ಹೆಗಲೆಣೆಯಾಗಿ ನಿಂತ ಈ ಧೀರ ವನಿತೆ ಬದುಕಿನುದ್ದಕ್ಕೂ ಕಂಡದ್ದು ಹಸಿವು, ಅಪಮಾನ, ಅನಾರೋಗ್ಯ ಮತ್ತು ಭರಿಸಲಾಗದ ನೋವು. ತಿಳಿದಿರಲಿ, ತನ್ನ ಬದುಕಿನ ಈ ಯಾವ ಸಂಕಟಗಳು ತನ್ನ ಜತೆಗಾರನ ಕನಸುಗಳಿಗೆ ಅಡ್ಡಿಯಾಗದಿರಲಿ ಎಂಬ ಮಹಾ
ಎಚ್ಚರಿಕೆ, ಸಾಕ್ಷಾತ್ಕರಿಸಿದ್ದು ಒಂದಿಡೀ ದೇಶವನ್ನು ತನ್ಮೂಲಕ ಬೆಳಕಿನ ರೇಖೆಗಳೆ ಗೊತ್ತಿಲ್ಲದೆ ಕತ್ತಲಲ್ಲೇ ಬದುಕು ಮುಗಿಸಬೇಕಿದ್ದ ತನ್ನಿಡೀ ಕುಲವನ್ನು.

ಪ್ರೇಮಕವಿ ಮಿರ್ಜಾ ಗಾಲಿಬ್ ಹೇಳುತ್ತಾನೆ:
ಈ ಪ್ರೀತಿಯಲಿ
ನಾನು ಮೂಕನಾದಾಗ
ನನ್ನೆಲ್ಲಾ ಭಾವಗಳಿಗೆ
ಅವಳು ದನಿಯಾಗುತ್ತಾಳೆ
ನನಗದೇ ಆಶ್ಚರ್ಯ!
ನನ್ನೆಲ್ಲಾ ಸಂವೇದನೆಗಳ
ಹೇಗೆ ಊಹಿಸುತ್ತಾಳೆ?

ಜಗದೋದ್ಧಾರಕ ಪತಿಗಾಗಿ ಸಂಪೂರ್ಣ ಬದುಕನ್ನು ಮುಡಿಪಾಗಿಟ್ಟು, ಪ್ರೀತಿಯ ಸಾರ್ವಕಾಲಿಕತೆಗೆ ಹೊಸ ಭಾಷ್ಯ ಬರೆದ ಈ ಹೆಣ್ಣುಮಗಳು, ನಿಷ್ಕಲ್ಮಶ ಪ್ರೀತಿ ಮತ್ತು ಕಾಳಜಿಗಳನ್ನು ಹೊಂದಿರುವ ಸಖನೊಬ್ಬ ಸಾಧಿಸಬಹುದೇನೆಂಬುದನ್ನು ತನ್ನ ಸಂಗಾತಿಯ ಮೂಲಕ ಜಗತ್ತಿಗೆ ಸಾದರಪಡಿಸಿದ್ದು ಅವರೀರ್ವರ ನಡುವಿನ ಮಧುರ ಪ್ರೇಮದ ಅಮರಗಾಥೆ!

ತ್ಯಾಗ, ಸಂಕಲ್ಪದ ಈ ಪ್ರೀತಿಯ ಪಯಣದಲ್ಲಿ ಆಕೆ ಕಳೆದುಕೊಂಡದ್ದು ತನ್ನ ಹೆತ್ತ ಕುಡಿಗಳನ್ನು. ಈ ನೋವು ಅಂತ್ಯವಾಗಿದ್ದು ಆಕೆಯ ಅಕಾಲಿಕ ಮರಣದಲ್ಲಿ.

ಹೀಗೆ, ತನ್ನ ಪತಿಗಾಗಿ ತನ್ನ ಬದುಕನ್ನೇ ಸಮರ್ಪಿಸಿ, ತ್ಯಾಗಗೈದ ಆ ಹೆಣ್ಣುಮಗಳ್ಯಾರು ಗೊತ್ತೆ….!? ಆಕೆಯೇ ಮಹಾತಾಯಿ ರಮಾಬಾಯಿ. ತನ್ನ ಮಡದಿಯ ಈ ಅಪರಿಮಿತ ಬಲಿದಾನದ ಕಾರಣದಿಂದ ಭಾರತದ ಶೂದ್ರ, ಅಸ್ಪೃಶ್ಯ, ಅಲ್ಪಸಂಖ್ಯಾತ ಮತ್ತು ಮಹಿಳೆಯರನ್ನು ತಾರತಮ್ಯಗಳ ಸಂಕೋಲೆಗಳಿಂದ ಬಿಡುಗಡೆಗೊಳಿಸುವ ಚೈತನ್ಯ ಪಡೆದವರು ಮತ್ಯಾರು ಅಲ್ಲಾ…! ಅವರೇ, ಭಾರತ ಭಾಗ್ಯವಿಧಾತ ಬಾಬಾಸಾಹೇಬ್ ಭೀಮರಾವ್
ಅಂಬೇಡ್ಕರ್.

ನಮ್ಮ ವರ್ತಮಾನದ ಈ ಮಹಾ ಪ್ರೇಮಮಯಿ ದಂಪತಿಗಳ ನಡುವಿನ ಅನುಬಂಧ ಭಾವಗಳಲ್ಲಿ ಪ್ರತಿಫಲಿಸಿದ್ದು ಹೀಗೆ,

“ಹೃದಯ ಸೌಜನ್ಯ, ಪರಿಶುದ್ಧಶೀಲ ಮತ್ತು ಯಾವುದೇ ಹಿತಚಿಂತಕರು ಇಲ್ಲದಿದ್ದ ಆ ದಿನಗಳಲ್ಲಿ ನಮ್ಮ ಪಾಲಿಗೆ ಬಂದಿದ್ದ ಬಡತನ ಮತ್ತು ಸಂಕಷ್ಟಗಳಲ್ಲಿ ಶಾಂತಚಿತ್ತದಿಂದ ಮನಃಪೂರ್ವಕವಾಗಿ ನನ್ನನ್ನು ಸಂತೈಸುತ್ತ ಸಹಕರಿಸಿದ ರಮಾಗೆ ಈ ಕೃತಿ ಅರ್ಪಿತ”.

ಇದು ಡಾ. ಅಂಬೇಡ್ಕರ್ ತಮ್ಮ ‘Thoughts on Pakistan‘ ಕೃತಿಯನ್ನು ತಮ್ಮ ಪ್ರೀತಿಯ ಮಡದಿ ರಮಾಬಾಯಿಯವರಿಗೆ ಅರ್ಪಿಸಿ ಬರೆದ ಸಾಲುಗಳು. ಪ್ರೀತಿಯೇ ಹೀಗಲ್ಲವೆ! ಬೌದ್ಧಿಕತೆಯ ಹಿಂದಿನ ತಾತ್ವಿಕತೆಯೆ ಮನ ಸಂತೈಸಿದ ಮಮತೆಯಲ್ಲವೆ…!

ಬಾಬಾ ಸಾಹೇಬರು ವಿದೇಶದಿಂದ ತಮ್ಮ ಮಡದಿ ರಮಾಗೆ ಬರೆದ ಪತ್ರ….

‘ರಮಾ ನಾನು ಆಗಾಗ ಕಣ್ತುಂಬಿಕೊಂಡು ಗಾಢ ಮೌನದಲ್ಲಿ ಲೀನವಾಗುತ್ತಿದ್ದೇನೆ. ನಿನ್ನ ಯಾತನೆಗಳು ನನ್ನನ್ನು ಕಾಡಲಾರಂಭಿಸಿ ಹೃದಯ ಛಿದ್ರವಾಗಿ, ದುಃಖ ನನ್ನೊಳಗೆ ತುಂಬಿರುತ್ತದೆ. ಅದೆಷ್ಟೋ ದಿನಗಳು ನೀನು ಹಸಿದ ಹೊಟ್ಟೆಯಲ್ಲಿ ಮಲಗಿದ್ದು ನನಗೆ ನೆನಪಿದೆ. ಮಿತಿಯಾಗಿರುತ್ತಿದ್ದ ರೊಟ್ಟಿಗಳನ್ನು ಮಕ್ಕಳಿಗೆ ನೀಡಿ, ಅರ್ಧ ರಾತ್ರಿಯವರೆಗೆ ನನ್ನನ್ನು ಕಾದು, ನಾನು ತಿಂದು ಉಳಿದರೆ ಮಾತ್ರ ನೀನು ತಿನ್ನುತ್ತಿದ್ದೆ. ಇಲ್ಲಾ ತಿಂದಂತೆ ನಟಿಸುತ್ತಿದ್ದೆ. ಬಡತನದ ಅಂಗಾಂಗಗಳು ನಿನ್ನನ್ನು ಪೂರ್ತಿ ತಿಂದುಬಿಟ್ಟಿದ್ದವು. ಚಿಮಣಿ ದೀಪದಲ್ಲಿ ರಾತ್ರಿಗಳನ್ನು ಸವೆಸಿದೆ. ಒಂದೆರಡು ಬೆಂಕಿಪೊಟ್ಟಣದಲ್ಲಿಯೇ ತಿಂಗಳುಗಳನ್ನು ಉರುಳಿಸಿದೆ. ಇನ್ನು ನೀನು ಉರುವಲಿಗಾಗಿ ಅಲೆಯದ ಜಾಗವಿಲ್ಲ. ಮುರಿದು ಬಿದ್ದ ಮನೆಯ ಸೂರನ್ನು ಸರಿಪಡಿಸುವುದು, ಹರಿದ ಸಂಸಾರಕ್ಕೆ ತೇಪೆ ಹಾಕುವುದು ನಿನ್ನ
ಬದುಕಾಗಿ ಹೋಗಿತ್ತು. ಉಪ್ಪು, ಖಾರ, ಕಾಳು ಕಡ್ಡಿಗಳ ಮಿತಿಯಲ್ಲಿಯೇ, ನೀನು ಸಂಸಾರದ ನೊಗವನ್ನು ಎಳೆಯುತ್ತಿದ್ದೆ. ನೋವು ಯಾತನೆಗಳನ್ನು ಬಿಟ್ಟು ನಾನು ನಿನಗೆ ಬೇರೇನನ್ನೂ ನಿನಗೆ ನೀಡಲಾಗಲಿಲ್ಲ. ಇದು ನೀನಲ್ಲದೇ ಬೇರೆ ಯಾವುದೇ ಹೆಣ್ಣಿಗಾದರೂ ಇಷ್ಟವಾಗುತ್ತಿತ್ತೇ? ಶ್ರೀಮಂತಿಕೆಯನ್ನು ಬಯಸುವವಳು ನನ್ನನ್ನು ಕೈ
ಹಿಡಿದಿದ್ದರೆ, ಆಕೆ ನನ್ನನ್ನು ಎಂದೋ ಬಿಟ್ಟು ಹೋಗುತ್ತಿದ್ದಳು. ಹೀಗಾಗಿದ್ದರೆ ನಾನು ವಿಚಲಿತನಾಗಿ ಬಿಡುತ್ತಿದ್ದೆ. ಆಗ ನನ್ನ ಕನಸು ನುಚ್ಚುನೂರಾಗುತ್ತಿತ್ತು. ಹಾಗಾಗಿ ನನ್ನ ಸಾಧನೆಯ ಮೂಲ ಪ್ರೇರಣೆ ನೀನೆ. ರಮಾ, ನನ್ನ ಬದುಕಿನಲ್ಲಿ ನೀನು ಬಾರದಿದ್ದರೆ ನಾನು ಶೂನ್ಯನಾಗಿ ಬಿಡುತ್ತಿದ್ದೆ’.

  • ಡಾ. ಬಿ.ಆರ್.ಅಂಬೇಡ್ಕರ್

ಮಮತೆ, ಕರುಣೆ, ಮಾನವತೆಗಳು ಮೇಳೈಸಿದ ಈ ನಿಜ ಪ್ರೀತಿ ಎಲ್ಲಾ ಕಾಲದ ಆದರ್ಶವಾಗಲಿ ಎಂದು ಆಶಿಸುತ್ತಾ, ಇದೇ ಫೆಬ್ರವರಿ 07 ಕ್ಕೆ 125 ವಸಂತಗಳನ್ನು ದಾಟಿದ ರಮಾಬಾಯಿ ಅಂಬೇಡ್ಕರರನ್ನು ಸ್ಮರಿಸುತ್ತಾ, ನಿಮಗೆಲ್ಲಾ ವ್ಯಾಲೆಂಟೈನ್ ಡೇ ಯಾನೆ ಪ್ರೇಮಿಗಳ ದಿನದ ಶುಭಾಶಯಗಳು.

ಈ ಪ್ರೇಮ ಪತ್ರಗಳು
ನನ್ನ ನೋಟ ದಾಟಿಸಲು
ವಿಫಲವಾಗಿವೆ.
ನೆತ್ತರೊಳಗೆ ಅದ್ದಿ
ಬರೆದ ಲೇಖನಿಗಳ
ಇವಳೆದುರು ಇಡುವ ಬಗೆ
ನನಗೆ ಕಾಣದಾಗಿದೆ’.

-ಮಿರ್ಜಾ ಗಾಲಿಬ್.

ಲೇಖಕರು :
ಪ್ರೊ. ಸಂದೇಶ ಎಚ್ ರತ್ನಪುರಿ ಮೈಸೂರು,
ಇಂಗ್ಲೀಷ್ ಪ್ರಾಧ್ಯಾಪಕರು

Leave a Reply

Your email address will not be published. Required fields are marked *