ಎಲಿಫಂಟ್ ಕಾರಿಡಾರ್ : ದಾಂಡೇಲಿ ದಂಡಕಾರಣ್ಯದ ತುರ್ತು

ಒಂದು ಕಾಲದಲ್ಲಿ ದಾಂಡೇಲಿಯ ದಂಡಕಾರಣ್ಯದಲ್ಲಿ ಆನೆಗಳ ಓಡಾಟ ಕ್ಕೆ ಹೆಚ್ಚಿನ ಕಾಡು ಪ್ರದೇಶಗಳು , ಸಮ್ರದ್ಧವಾದ ಆಹಾರಗಳು ಕಾಡಿನಲ್ಲೆ ಲಭ್ಯವಿರುತ್ತಿತ್ತು. ಅವುಗಳಿಗೆ ಹೆಚ್ಚಿನ ಕಿರಿಕಿರಿಯಾಗುತ್ತಿರಲಿಲ್ಲ.

ಆದರೆ ಇಂದಿನ ಪರಿಸ್ಥಿತಿಯ ಅವಲೋಕನ ಮಾಡಿದರೆ ಆನೆಯೆಂಬ ಬುದ್ಧಿವಂತ,  ಸಾಂಪ್ರದಾಯಿಕ, ಸಾಂಸ್ಕೃತಿಕ ಗೌರವದ ರಾಷ್ಟ್ರೀಯ ಪರಂಪರೆಯ ಪ್ರಾಣಿಯ ಸಂರಕ್ಷಣೆಯೇ ಇಲಾಖೆಗೆ ಸವಾಲಿನ ಕೆಲಸವಾಗಿದೆ.ವನ್ಯ ಜೀವಿ ಕಾನೂನಿನಡಿ ಕಟ್ಟುನಿಟ್ಟಿನ ರಕ್ಷಣೆಯನ್ನು ನೀಡಲಾಗಿದೆಯಾದರೂ ಮಾನವ ಸೃಷ್ಠಿಸಿದ ಅವಾಂತರಗಳಿಂದ ಆನೆ ಮತ್ತು ಮಾನವ  ಸಂಘರ್ಷ ಹೆಚ್ಚಾಗಿದೆ.

ದಾಂಡೇಲಿಯ ಕಾಳಿಕೊಳ್ಳದ ಕಾಡುಗಳ ನಡುವೆ ಬೃಹತ್‌ ಜಲವಿದ್ಯುತ್ ಯೋಜನೆಗಳು, ಮೈನಿಂಗ್ ಕಂಪೆನಿಯಿಂದ ಅದಿರಿಗಾಗಿ ತೆಗೆದ ಆಳವಾದ  ಕಂದಕಗಳು, ನಗರೀಕರಣ , ಕೈಗಾರಿಕೆಗಳ ಸ್ಥಾಪನೆಯ ಫಲವಾಗಿ ಆನೆಗಳು ಚಲಿಸುವ ಮಾರ್ಗಗಳು ಕಿರಿದಾಗುತ್ತ ಸಾಗಿದೆ. ಈ ಭಾಗದ ಆನೆಗಳ ಸಂರಕ್ಷಣೆಯ ಉದ್ದೇಶದಿಂದ ಸುರಕ್ಷಿತ ‘ಎಲಿಫೆಂಟ್ ಕಾರಿಡಾರ್’  ( Elephant Corridor) ಬೇಕು ಎನ್ನುವ ಪ್ರಸ್ತಾವನೆ ಇದೆ. ಆದರೆ ಇದುವರೆಗಿನ  ಪ್ರಯತ್ನಕ್ಕೆ ಯಾವುದೇ ಯಶಸ್ಸು ಸಿಕ್ಕಿಲ್ಲ. ಇದರಿಂದ ಈ ಪ್ರದೇಶದ  ಆನೆಗಳ ಹಿಂಡು ಕಾಡು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಹಾರವನ್ನರಸಿ ಗ್ರಾಮದ ತೋಟ,ಗದ್ದೆಗಳತ್ತ ನುಗ್ಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಆನೆಗಳ ಹಿಂಡು ಹಳಿಯಾಳ,ದಾಂಡೇಲಿ ತಾಲ್ಲೂಕಿನ ಭಾಗವತಿ, ಡೊಂಕನಾಳ, ವಾಡಾ, ಗರಡೊಳ್ಳಿ, ಆಲೂರು , ಬೇಡರ ಶಿರಗುರು, ಬರ್ಚಿ, ವಿಟ್ನಾಳ, ಗೋಬರಾಳ ಮತ್ತಿತರ ಗ್ರಾಮಗಳಿಗೆ ನುಗ್ಗಿ  ಕಬ್ಬು, ಬಾಳೆ, ಭತ್ತ , ಅಡಿಕೆ, ತೆಂಗಿನ ಬೆಳೆಗಳನ್ನು ನಾಶ ಮಾಡುತ್ತಿದೆ.  ಬರಪೀಡಿತ ಪ್ರದೇಶದಲ್ಲಿರುವ ಅಳಿದುಳಿದ ಬೆಳೆ ಈ ಭಾಗದ ರೈತರ  ಕೈ ಸೇರದಂತಾಗಿದೆ. ಆನೆಗಳಿಗೂ ಆಹಾರದ ಕೊರತೆಯಾಗಿದ್ದು ಅವು ಎಲ್ಲೆಂದರಲ್ಲಿ ನುಗ್ಗುವುದರಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.ವನ್ಯ ಜೀವಿ ವಿಭಾಗದಿಂದ ರೈತರ ಬೆಳೆ ರಕ್ಷಣೆಯ ಉದ್ದೇಶದಿಂದ ಹಲವೆಡೆ ತೋಟ, ಗದ್ದೆಗಳ
ಸುತ್ತಮುತ್ತಲಿನ ಪ್ರದೇಶದಲ್ಲಿ ಟ್ರೆಂಚ್, ಐಬೇಕ್ಸ ಬೇಲಿ, ಲಕ್ಷಾಂತರ ಹಣ ಖರ್ಚುಮಾಡಿ

ಕಾಂಕ್ರೀಟ್ ತಡೆಗೋಡೆಗಳನ್ನು ನಿರ್ಮಿಸಿದ್ದಾರೆ. ಆದರೂ ಆನೆಗಳ ದಾಳಿಯಿಂದ ರೈತರ ಬೆಳೆ ರಕ್ಷಿಸುವುದು ಇಲಾಖೆಗೆ ಸವಾಲಾಗಿದೆ.

ಎಲಿಫೆಂಟ್ ಕಾರಿಡಾರ್ ಯೋಜನೆ ಜಾರಿಯಾದಲ್ಲಿ ಈ ಸಮಸ್ಯೆಗೆ ಪರಿಹಾರ ಸಿಗಲಿದೆ ಎನ್ನುವದು ಗ್ರಾಮಸ್ಥರ ಅಭಿಪ್ರಾಯ ಕೂಡ. ವ್ಯವಸ್ಥಿತ ಆನೆ ಸಂಚರಿಸುವ ಪಥ ನಿರ್ಮಾಣವಾದಲ್ಲಿ ಆನೆಗಳ ಹಿಂಡು ಅದೇ ಮಾರ್ಗದಲ್ಲಿ ಯಾವುದೇ ಅಡಚಣೆಯಿಲ್ಲದೆ ಸಂಚರಿಸಬಲ್ಲದು. ಆಹಾರದ ಕೊರತೆಯಿರುವುದಿಲ್ಲ. ಸಂತಾನೋತ್ಪತ್ತಿಗೆ ಅನುಕೂಲವಾಗಲಿದೆ. ಈ ಪಥದಲ್ಲಿ ಸಂಚರಿಸುವ ಆನೆಗಳಿಗೆ ರೇಡಿಯೋ ಕಾಲರ್ಅ ಳವಡಿಸಲಾಗುತ್ತದೆ. ಇದರಿಂದ  ಆನೆಗಳ ಇರುವಿಕೆ, ನಿರ್ದಿಷ್ಟ  ಸಂಚಾರದ ಮಾಹಿತಿ ಲಭ್ಯವಾಗುವದರಿಂದ ಆನೆಗಳ ಅಧ್ಯಯನಕ್ಕೂ ಅನುಕೂಲ. ಜೊತೆಗೆ ರೈತರ ಬೆಳೆಗಳಿಗೆ ರಕ್ಷಣೆ ಸಿಗಲಿದೆ. ಮನುಷ್ಯ  ಮತ್ತು ಆನೆಗಳ ನಡುವಿನ  ಸಂಘರ್ಷವನ್ನು ತಪ್ಪಿಸಬಹುದು. ಆನೆಗಳನ್ನು ಅವುಗಳ ಪಾಡಿಗೆ ಬಿಟ್ಟರೆ ಅವು ತಂತಾನೆ ತಮ್ಮ ಜೀವನ ರೂಪಿಸಿಕೊಳ್ಳಲಿದೆ.

‘ರಾಷ್ಟ್ರೀಯ ಆನೆ ಕಾರಿಡಾರ್ ಯೋಜನೆ’ (National Elephant Corridor) ಆನೆಗಳು ಚಲಿಸುವ ಮಾರ್ಗದ ಹಕ್ಕುಗಳ ರಕ್ಷಣೆಯ ಗುರಿ ಹೊಂದಿದೆ. ವನ್ಯಜೀವಿಗಳ ಆವಾಸ  ಸ್ಥಾನವನ್ನು ಭದ್ರಪಡಿಸುವ ಮೂಲಕ   ಪರಿಸರ ಸಂಪರ್ಕವನ್ನು ರಕ್ಷಿಸುವುದು.ಜೀವ ವೈವಿಧ್ಯತೆಯ ಮೇಲ್ವಿಚಾರಣೆ ಇವೆಲ್ಲವೂ ಈ ಯೋಜನೆಯ ಉದ್ದೇಶ. ಆನೆಗಳ ಸಂಚಾರವನ್ನು ಸುಗಮಗೊಳಿಸುವ  ಉದ್ದೇಶದ ಈ ಯೋಜನೆ ಇಲ್ಲಿ ಜಾರಿ ಮಾಡುವ ಅಗತ್ಯವಿದೆ.

ಲೇಖಕರು :
ಎನ್. ಜಯಚಂದ್ರನ್,
ದಾಂಡೇಲಿ

Leave a Reply

Your email address will not be published. Required fields are marked *