ಮಸೀದಿ ಪುಡಿ ಪುಡಿ ಮಾಡುತ್ತೇವೆ ಎಂದು ಇತ್ತೀಚೆಗಷ್ಟೇ ನಾಲಿಗೆ ಹರಿಬಿಟ್ಟಿದ್ದ ರಾಜ್ಯ ಬಿ.ಜೆ.ಪಿ. ಮುಖಂಡ ಕೆ.ಎಸ್.ಈಶ್ವರಪ್ಪ, ಇದೀಗ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಮತ್ತು ಶಾಸಕ ವಿನಯ ಕುಲಕರ್ಣಿ ಅವರನ್ನು ಗುಂಡಿಟ್ಟು ಕೊಲ್ಲುವ ಬಗ್ಗೆ ಕಾನೂನು ತರಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಧ್ಯಮದೆದುರು ಒತ್ತಾಯ ಮಾಡಿದ್ದಾರೆ.
ರಾಜ್ಯಕ್ಕೆ ಬರಬೇಕಾದ ಅನುದಾನದ ಹಂಚಿಕೆಯಲ್ಲಿ ಕೇಂದ್ರ ಸರಕಾರ ನ್ಯಾಯಯುತ ಧೋರಣೆ ಅನುಸರಿಸುತ್ತಿಲ್ಲ, ದಕ್ಷಿಣ ರಾಜ್ಯಗಳಿಗೂ ಇದೇ ರೀತಿ ಅಸಮ ನೀತಿ ಅನುಸರಿಸುತ್ತಿದೆ. ಹೀಗೆಯೇ ಆದರೆ ದಕ್ಷಿಣ ಬಾರತವನ್ನು ಪ್ರತ್ಯೇಕ ರಾಷ್ಟ್ರವನ್ನಾಗಿ ಮಾಡಿಕೊಡಿ ಎಂದು,ಕೇಳಬೇಕಾಗುತ್ತದೆ ಎಂದು ಸಂಸದ ಡಿ.ಕೆ.ಸುರೇಶ್ ಕೂಡ ತಮ್ಮ
ಜವಾಬ್ದಾರಿಯುತ ಸ್ಥಾನವನ್ನೂ ಮರೆತು ಮಾತನಾಡಿದ್ದರು. ಅವರ ಮಾತಿಗೆ ಸೊಪ್ಪು ಹಾಕಿದವರು ವಿನಯ ಕುಲಕರ್ಣಿ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನದ ಹಣ ಹಂಚಿಕೆಯಲ್ಲಿ ಕರ್ನಾಟಕದ ಪಾಲನ್ನು ಸರಿಯಾಗಿ ನೀಡದೇ ಅನ್ಯಾಯ ಮಾಡುತ್ತಿದೆ ಎಂಬ ಹೇಳಿಕೆಯನ್ನು ನೀಡುವಾಗ ಡಿ.ಕೆ.ಸುರೇಶ್ ಸ್ವಲ್ಪ ಹದ ತಪ್ಪಿ ಮಾತನಾಡಿದರು ಎಂದೇ ಇಟ್ಟುಕೊಳ್ಳೋಣ. ಆದರೆ ಕಣ್ಣೆದುರೇ ರಾಜ್ಯಕ್ಕೆ ಅನ್ಯಾಯವಾಗುತ್ತಿರುವಾಗ
ಅವರು ಕೇಂದ್ರದ ಮೇಲೆ ಒತ್ತಡ ಹೇರುವುದಕ್ಕಾಗಿ ತಮ್ಮದೇ ದಾಟಿಯಲ್ಲಿ ದೇಶ ವಿಭಜನೆಯ ಬಗ್ಗೆ ಬೆದರಿಕೆಯ ಭಾಷೆಯಲ್ಲಿ ಹೇಳಿದ್ದಾರೆ. ಆದರೆ ಅವರ ಹೇಳಿಕೆಯನ್ನು ‘ದೇಶದ್ರೋಹ’ ಎಂದು ಹೇಗೆ ಹೇಳಲು ಸಾಧ್ಯ? ಕೇಂದ್ರ ಅನ್ಯಾಯ ಮಾಡುತ್ತಿದ್ದರೆ ರಾಜ್ಯ ತಪ್ಪೆಗೆ ಕೈ ಕಟ್ಟಿಕುಳ್ಳಬೇಕೆ? ತಪ್ಪು ಎಲ್ಲಿ ಆಗಿದೆ, ಆಗುತ್ತಿದೆ ಎಂದು ಗಮನಿಸುವುದುನ್ನು ಬಿಟ್ಟು ಬಿಜೆಪಿ ದೇಶದ್ರೋಹದ ಹಣೆಪಟ್ಟಿಯನ್ನು ಡಿ.ಕೆ.ಸುರೇಶ್ ಮತ್ತು ವಿನಯ ಕುಲಕರ್ಣಿ ಅವರಿಗೆ ಅಂಟಿಸುವುದು ಎಷ್ಟರ ಮಟ್ಟಿಗೆ ಸಮಂಜಸ? ಒಂದೇ ದೇಶದಲ್ಲಿ , ಅದೇ ದೇಶದ ನೀರನ್ನು ಕುಡಿಯವ ಮಂದಿಯ ಮಧ್ಯೆ ಯಾಕೆ ಮಲತಾಯಿ ಧೋರಣೆಯನ್ನು ಬಿಜೆಪಿ ನೀತೃತ್ವದ ಕೇಂದ್ರ ಸರಕಾರ ಅನುಸರಿಸುತ್ತಿದೆ ಎಂದು ಕರ್ನಾಟಕದ ರಾಜ್ಯ ಕೇಳುವುದು ತಪ್ಪು ಅಂತ ನಿರ್ಧಾರಕ್ಕೆ ಬರುವುದಾದರೂ ಹೇಗೆ?
ನಮ್ಮ ಕರ್ನಾಟಕವನ್ನೇ ಉದಾಹರಣೆಯನ್ನಾಗಿ ತೆಗೆದುಕೊಳ್ಳುವುದಾದರೆ ‘ಉತ್ತರ ಕರ್ನಾಟಕ ಅಭೀವೃದ್ಧಿಯ ಬಗ್ಗೆ ಇಲ್ಲಿಯ ಸರಕಾರಗಳು ಮಲತಾಯಿ ಧೋರಣೆ ಅನುಸರಿಸುತ್ತಲೇ ಬಂದಿವೆ’ ಎಂದು ಆ ಭಾಗದ ಕೆಲ ಮುಖಂಡರು ಕೆಲವಾರು ವರ್ಷಗಳಿಂದ ಪ್ರತ್ಯೇಕ ರಾಜ್ಯದ ಅಹವಾಲಿನ ಸೊಲ್ಲನ್ನು ಮೆಲ್ಲಗೆ ಎತ್ತುತ್ತ ಬಂದಿದ್ದಾರೆ. ಈ ಧ್ವನಿಯನ್ನು ನಾಡದ್ರೋಹ ಎಂದು ಪರಿಗಣಿಸಲು ಸಾಧ್ಯವೇ?
ಎ.ಐ.ಸಿ.ಸಿ.ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಸಂಸತ್ತಿನಲ್ಲಿ ಬಿಜೆಪಿ ಖಂಡಿಸಿ ಅಬ್ಬರಿಸುವಾಗ ಪ್ರತಿಕ್ರಿಯಿಸುತ್ತ ‘ಡಿ.ಕೆ.ಸುರೇಶ್ ಹೇಳಿದ್ದು ಸರಿಯಲ್ಲ’ ಎಂದು ಹೇಳಿಕೆ ನೀಡುವಾಗ ಸ್ವಲ್ಪ ದುಡುಕಿದರು ಅನಿಸುತ್ತದೆ. ಡಿಕೆಶಿ ಹೇಳಿಕೆಯ ಒಳಮರ್ಮ ಸದನಕ್ಕೆ ತಿಳಿಸುವ ಸಣ್ಣ ಪ್ರಯತ್ನವನ್ನೂ ಮಾಡಿಲ್ಲ. ಅವರು ರಾಷ್ಟ್ರ ಮಟ್ಟದ
ಜವಾಬ್ದಾರಿಯುತ ಸ್ಥಾನದಲ್ಲಿದ್ದ ಕಾರಣಕ್ಕೆ ಅಖಂಡ ರಾಷ್ಟ್ರವನ್ನು ಪ್ರತಿನಿಧಿಸಿ ಸಂಸತ್ತಿನಲ್ಲಿ ಹಾಗೆ ಹೇಳಿರಬಹುದಾದರೂ ಅವರ ‘ಖಂಡನೆ’ ಸಮರ್ಥನೀಯವಲ್ಲ.
ಕೇಂದ್ರ ಸರ್ಕಾರ ರಾಜ್ಯಕ್ಕೆ ಎಸಗುತ್ತಿರುವ ದ್ರೋಹದ ಕುರಿತಂತೆ ಪ್ರತಿಭಟಿಸಲು, ಎಚ್ಚರಿಕೆ ನೀಡಲು ಜನ ಸಂಸದ ಡಿ.ಕೆ.ಸುರೇಶ್ ಅವರನ್ನು ಸಂಸತ್ತಿಗೆ ಕಳುಹಿಸಿದ್ದಾರೆ. ಅವರು ಅಲ್ಲಿ ಕೇಂದ್ರದ ಧೋರಣೆಯ ವಿರುದ್ಧದ ಧ್ವನಿ ಎತ್ತುವುದನ್ನು ಬಿಟ್ಟು ಬೆಂಗಳೂರಿನಲ್ಲಿ ನಿಂತು ಮಾಧ್ಯಮದ ಎದುರು ಎದೆ ಉಬ್ಬಿಸಿ ‘ದೇಶ ವಿಭಜನೆ’ಯ ಧ್ವನಿ ಎತ್ತುವುದು ಕೂಡ ಸಮಂಜಸ ಅಲ್ಲ. ಮಾತೆತ್ತಿದರೆ ದಂ-ತಾಕತ್ತಿನ ಬಗ್ಗೆ ಮಾತನಾಡುವ ರಾಜ್ಯದಿಂದ ಆಯ್ಕೆ ಆದ ಬಿಜೆಪಿ ಸಂಸದರಂತೂ ಕೇಂದ್ರದಿಂದ ಕರ್ನಾಟಕಕ್ಕಾಗುವ ದ್ರೋಹದ ವಿರುದ್ಧ ಸಂಸತ್ತಿನಲ್ಲಿ ಮಾತನಾದೆ ಬಾಯಿಗೆ ಬೀಗ ಹಾಕಿ ಕುಳಿತಿದ್ದಾರೆ. ಈಗ ಈ ‘ದೇಶಭಕ್ತ’ ರೆಲ್ಲ ಸುರೇಶ್ ಅವರನ್ನು ‘ದೇಶದ್ರೋಹಿ’ ಎಂದು ಜರೆಯುತ್ತಿದ್ದಾರೆ.
ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಸಂಸದರೊಬ್ಬರನ್ನು ಗುಂಡಿಕ್ಕುವ ಬಗ್ಗೆ ಹೇಳಿರುವುದು ಅವರ ಅಪ್ರಭುದ್ಧತೆಯನ್ನು ಎತ್ತಿ ತೋರಿಸುತ್ತಿದೆ. ಅವರಿಗೆ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಟಿಕೆಟ್ ಕೊಡದೇ ಕುಳ್ಳಿಸಿದೆ. ಇದೀಗ ತಮ್ಮ ಮಗನಿಗೆ ಹಾವೇರಿಯಿಂದ ಹೇಗಾದರೂ ಮಾಡಿ ಲೋಕಸಭೆ ಚುನಾವಣೆಗೆ ಪಕ್ಷದ ಟಿಕೆಟ್ ಗಿಟ್ಟಿಸಬೇಕು ಎಂಬ ಅವರ ‘ಕರುಳ ಕೂಗು’ ಬಿಜೆಪಿಗೆ ಹೈಕಮಾಂಡ್ ಗೆ ಮುಟ್ಟುತ್ತಿಲ್ಲ. ಹೇಗಾದರೂ
ಮಾಡಿ ಹೈಕಮಾಂಡ್ ಗಮನವನ್ನು ತನ್ನತ್ತ ಸೆಳೆಯಲು ಈ ರೀತಿ ಹುಚ್ಚುಹುಚ್ಚಾಗಿ ಗುಂಡಿಕ್ಕುವಂಥ ಕ್ರಿಮಿನಲ್ ಭಾಷೆ ಪ್ರಯೋಗಿಸುವುದು ಅವರ ಹಿರಿತನಕ್ಕೆ ಭೂಷಣವಲ್ಲ. ದೇಶವಿಭಜನೆಯ ಬಗ್ಗೆ ಮಾತನಾಡಿದ ಡಿ.ಕೆ.ಸುರೇಶ್ ಹೇಳಿಕೆಯನ್ನು ಖಂಡಿಸಲು, ಅವರ ವಿರುದ್ಧ ಕ್ರಮ ಕೈಗೊಳ್ಳಲು ಪ್ರಧಾನಿಯವರಿಗೆ ಮನವಿ ಮಾಡಲು ಬೇರೆಯೇ
ಜವಾಬ್ದಾರಿಯುತ ಭಾಷೆ ಇತ್ತು. ಭ್ರಷ್ಟಾಚಾರದ ಪಿಂಡಿಗಟ್ಟಳೆ ಹಣವನ್ನು ಲೆಕ್ಕ ಮಾಡುವ ನಾಲ್ಕು ಮಶಿನ್ ಇಟ್ಟುಕೊಳ್ಳುವುದು ಕೂಡ ‘ದೇಶದ್ರೋಹ’ ಎಂಬುದು ಈಶ್ವರಪ್ಪನವರ ಗಮನದಲ್ಲಿರಬೇಕು. ಒಂದೊಂದು ಪೈಸೆ ಭ್ರಷ್ಟಾಚಾರ ಮಾಡಿದರವರನ್ನೂ ದೇಶ ದ್ರೋಹದ ಯಾದಿಯಲ್ಲಿ ಸೇರಿಸಬೇಕಾದ ಕಾನೂನು ತರಬೇಕಾದ ತುರ್ತು ಈ ದೇಶಕ್ಕಿದೆ.
ಆಶ್ಚರ್ಯ ಅಂದರೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಸಂಸದ ಡಿ.ಕೆ.ಸುರೇಶ್ಅ ವರ ‘ದೇಶ ವಿಭಜನೆ’ಯ ಹೇಳಿಕೆಯನ್ನು ಖಂಡಿಸಿದರೇ ಹೊರತು, ತಮ್ಮದೇ ಪಕ್ಷದ ನಾಯಕ ಈಶ್ವರಪ್ಪ ಅವರು ಉದುರಿಸಿದ ನುಡಿಮುತ್ತು ‘ಸಂಸದನನ್ನು ಗುಂಡಿಕ್ಕುವ’ ಬಗ್ಗೆ ತುಟಿ ಪಿಟಕ್ ಅನ್ನಲಿಲ್ಲ. ಭಾರತ ಎಲ್ಲವನ್ನೂ, ಎಲ್ಲರನ್ನೂ ಗಮನಿಸುತ್ತಿದೆ.
ಲೇಖಕರು
ಅರವಿಂದ ಕರ್ಕಿಕೋಡಿ
ಪ್ರಧಾನ ಸಂಪಾದಕರು
ಹಣತೆವಾಹಿನಿ