ಯಕ್ಷಗಾನಕ್ಕೆ ‘ಒಡವೆಯಿದ್ದೂ ಬಡವೆ’ ಯಾಗುವ ಈ ಪಾಡು ಯಾಕೆಬಂತು?

(…ಹಿಂದಿನ ಸಂಚಿಕೆಯಿಂದ ಮುಂದುವರೆದದ್ದು ಭಾಗ-6)

….ಪ್ರಸಂಗ ಗದಾಯುದ್ಧ. ಚಿಟ್ಟಾಣಿಯವರ ಕೌರವ. ಬೆಳಗಿನ ಜಾವ 5 ಘಂಟೆಯಾದರೂ ಚಿಟ್ಟಾಣಿಯವರ ಕೌರವನ ಪ್ರವೇಶ ಆಗಲಿಲ್ಲ.ಜನರೆಲ್ಲ ಎದ್ದು ನಿಂತು ಪ್ರತಿಭಟಿಸುವುದಕ್ಕೆ ಆರಂಭಿಸಿದರು. ಕೃಷ್ಣನ ಪಾತ್ರಧಾರಿ ಉಳಿದ ಪಾತ್ರಧಾರಿಗಳಿಗೆ  ಪ್ರಸಂಗವನ್ನು ಮುಂದುವರಿಸುವುದಕ್ಕೆ ಹೇಳಿದರು.ಜನರೆಲ್ಲ ಕಲ್ಲುಗುಂಡುಗಳನ್ನು ಹಿಡಿದು ರಂಗಸ್ಥಳದತ್ತ ನುಗ್ಗಿ ಕಲಾವಿದರನ್ನು ಬೆದರಿಸಿ ಒಳಗೆ ಕಳಿಸಿದರು.ಆ ಕಲಾವಿದರ ಪರಿಸ್ಥಿತಿ ಏನಾಗಿರಬೇಡ. ಅಂತೂ ಅಕಾಲ ಪ್ರಸವ ಆದ ಹಾಗೆ ಚಿಟ್ಟಾಣಿಯವರ ಕೌರವನ ಪ್ರವೆಶವಾಯಿತು.ಆವಾಗ ನಾನೂ ಸಂತೋಷ ಪಟ್ಟಿದ್ದೆ. ಕಥಾಭಾಗ ಅಲ್ಲಿಯವರೆಗೆ ಮುಟ್ಟಿರಲಿಲ್ಲ. ಈಗ ವಿಚಾರ ಮಾಡಿದರೆ ಇದು ಎಂಥಾ ಅಪಾಯಕಾರಿ ಬೆಳವಣಿಗೆ ಎಂಬುದು ಅರ್ಥವಾಗಿ ಮನಸ್ಸಿಗೆ  ತುಂಬಾ ವ್ಯಥೆಯಾಗುತ್ತದೆ.ಕಲೆಗಿಂತಲೂ ದೊಡ್ಡವರು ಯಾರೂ ಅಲ್ಲ, ಕಲಾವಿದರಿಗೆ ತಾರಾ ಮೌಲ್ಯ ಬರುತ್ತಿದ್ದ ಹಾಗೆ ತಾನು ಆಡಿದ್ದೇ ಮಾತು ಮಾಡಿದ್ದೇ ಶಾಸನ ಅನ್ನುವಂಥ ವಾತಾವರಣ ನಿರ್ಮಾಣವಾಗುವುದಕ್ಕೆ ಆರಂಭವಾಯಿತು….

2 ) ಯಕ್ಷಗಾನಕ್ಕೆ ಕಸಿ ಕಟ್ಟುವ ಪ್ರಯೋಗ :
ಬೇರೆ ಕಲಾ ಪ್ರಕಾರಗಳಿಂದ ತಂದು ಯಕ್ಷಗಾನಕ್ಕೆ ಕಸಿ ಕಟ್ಟುವ ಪ್ರಯೋಗಗಳಾದವು.ಮೊದಲು ಈ ಪ್ರಯೋಗ ಕಾಣಿಸಿಕೊಂಡಿದ್ದು ಭಾಗವತಿಕೆಯಲ್ಲಿ. ಯಕ್ಷಗಾನದ ತಿಟ್ಟು ಮಟ್ಟುಗಳನ್ನು ಬಿಟ್ಟು ಲಾವಣಿ ಹಾಡುಗಳನ್ನು, ಸಿನೇಮಾ ಶೈಲಿಯ ಹಾಡುಗಳನ್ನು, ಸಂಗೀತ ಶೈಲಿಯ ಹಾಡುಗಳನ್ನು ತಂದು ಕಸಿಕಟ್ಟಿ ಹಾಡುವುದಕ್ಕೆ ಆರಂಭಿಸಿದರು. ಕೆಲವರು ಈ ಪ್ರಯೋಗದಿಂದ ಬಹು ಬೇಡಿಕೆಯ ಭಾಗವತರಾದರು. ಹೆಸರು ಹಣ ಪ್ರಸಿದ್ಧಿಯನ್ನೂ ಗಳಿಸಿಕೊಂಡರು. ಆದರೆ

ಯಕ್ಷಗಾನ ರಂಗಭೂಮಿಯ ಆವರಣವೇ ಭಂಗವಾಗಿಹೋಯಿತು. ಯಕ್ಷಗಾನಕ್ಕೆ ಬಿದ್ದ ಮೊದಲ ಮರ್ಮಾಘಾತ ಇದು. ಯಕ್ಷಗಾನದ ಪ್ರಧಾನ ಅಂಗವೇ ರೋಗಗ್ರಸ್ತವಾಗಿ ಹೋಯಿತು. ನೆಬ್ಬೂರು, ಕೊಳಗಿಯಂಥ ಶುದ್ಧ ಯಕ್ಷಗಾನ ಶೈಲಿಯ ಭಾಗವತರುಗಳೇ ಈ ಹುಚ್ಚು ಅಲೆಯಲ್ಲಿ ಕೊಚ್ಚಿ ಹೋದರು. ನಂತರ ಸ್ತ್ರೀ ಪಾತ್ರಧಾರಿಗಳು ಭರತ ನಾಟ್ಯ,
ಕುಚಿಪುಡಿಯ ನೃತ್ಯಗಳನ್ನು ಯಕ್ಷಗಾನಕ್ಕೆ ಅಳವಡಿಸಿ ಪ್ರಸಿದ್ಧಿಯ ಉತ್ತುಂಗಕ್ಕೇರಿದರು. ಈ ಸಂದರ್ಭದಲ್ಲಿ ಒಂದು ಮಾತನ್ನು ಹೇಳುವುದಕ್ಕೆ ಇಚ್ಛಿಸುತ್ತೇನೆ. ಯಕ್ಷಗಾನಕ್ಕೆ ಎಲ್ಲಿಂದಲೂ ಏನನ್ನೂ ತಂದು ಕಸಿ ಕಟ್ಟುವ ಅಗತ್ಯ ಇಲ್ಲ.ಯಕ್ಷಗಾನ ತನಗೆ ತಾನೇ ಪರಿಪೂರ್ಣ.ಅದನ್ನು ಉಳಿಸಿಕೊಂಡು ಹೋದರೆ ಸಾಕು.ಅದೇ ಯಕ್ಷಗಾನ ರಂಗಭೂಮಿಗೆ ಮಾಡುವ ಮಹದುಪಕಾರ.


3 ) ಅತಿಯಾದ ವಾಣಿಜ್ಯೀಕರಣ:
1950 ರಲ್ಲಿ ಡೇರೆ ಮೇಳಗಳು ಆರಂಭಗೊಂಡವು. ಕಣ್ಣು ಕೋರೈಸುವ ವಿದ್ಯುತ್ ದೀಪಗಳು,ನಯನ ಮನೋಹರ ರಂಗ ಸಜ್ಜಿಕೆ, ಝಗಮಗಿಸುವ ವೇಷ ಭೂಷಣಗಳು, ಘಟಾನುಘಟಿ ಕಲಾವಿದರ ಹಿಮ್ಮೇಳ ಮುಮ್ಮೇಳ ಈ ಬಾಹ್ಯಾಡಂಬರಕ್ಕೆ ಪ್ರೇಕ್ಷಕರು ಮಾರಿಹೋದರು. ಟಿಕೇಟ್ಟಿಗಾಗಿ ನೂಕು ನುಗ್ಗಲು, ಹೊಡೆದಾಟ, ಬಡಿದಾಟ. ಮೇಳಗಳಿಗೆ ಭರಪೂರ ಕಲೆಕ್ಷನ್ನು. ಮೇಳಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಾ ಹೋಗಿ 18 ಕ್ಕೂ
ಮಿಕ್ಕಿ ಡೇರೆ ಮೇಳಗಳಾದವು. ಇಷ್ಟು ಮೇಳಗಳಿದ್ದರೂ ಎಲ್ಲ ಮೇಳಗಳಿಗೂ ಫುಲ್ ಕಲೆಕ್ಷನ್ನು. ಪ್ರೇಕ್ಷಕರನ್ನು ನಿಗ್ರಹಿಸುವುದಕ್ಕಾಗದೆ 9 ಗಂಟೆಗೇ ಟೆಂಟ್ಓಪನ್! ನಿಜವಾಗಲೂ ಆರಂಭದಲ್ಲಿ ಡೇರೆ ಮೇಳಗಳು ಮಹಾನ್ ಕ್ರಾಂತಿಯನ್ನೇ ಮಾಡಿದವು. 1960 ರಿಂದ 1985 ಯಕ್ಷಗಾನದ ಸುವರ್ಣ ಯುಗ. ಯಕ್ಷಗಾನ ಚಟುವಟಿಕೆಗಳ ಉಬ್ಬರದ ಕಾಲ. ಗುಣಮಟ್ಟದ ಯಕ್ಷಗಾನಗಳೂ ನಡೆಯುತ್ತಿದ್ದವು. ಆಟಕ್ಕೆ ಹೋಗುವುದೆಂದರೆ ಅದೇನು ತುರುಸು ಅದೇನು ಹುರುಪು. ಆ ದಿನಗಳನ್ನು ನೆನೆಸಿಕೊಂಡರೆ ರೋಮಾಂಚನವಾಗುತ್ತದೆ. ಈ ಸಂತೋಷ ಈ ಸಂಭ್ರಮ ಬಹಳ ದಿವಸ ಉಳಿಯಲಿಲ್ಲ. ಯಾವಾಗ ಮೇಳ ಮೇಳಗಳ ನಡುವೆ ಪೈಪೋಟಿ ಶುರುವಾಯಿತೊ ಪ್ರೇಕ್ಷಕರನ್ನು ಸೆಳೆಯುವುದಕ್ಕಾಗಿ ಯಕ್ಷಗಾನದಲ್ಲಿ ಸಲ್ಲದ ಅಪಸವ್ಯಗಳು ಆರಂಭವಾದವು. ವಿಶೇಷ ಆಕರ್ಷಣೆಗಳಿಗೆ ಎಲ್ಲಿಲ್ಲದ ಪ್ರಾಶಸ್ತ್ಯ ಬಂತು. ಐರಾವತ ಪ್ರಸಂಗದಲ್ಲಿ ಪ್ರತ್ಯಕ್ಷ ಆನೆಯನ್ನೇ ತಂದು ವಿಶೇಷ ಆಕರ್ಷಣೆಯಾಗಿಸಿದರು. ತೆಂಕು ಬಡಗು ಸೇರಿಸಿ ಮಿಶ್ರ ತಳಿಯ ಯಕ್ಷಗಾನ ನಡೆಯುವುದಕ್ಕೆ ಆರಂಭವಾಯಿತು. 3 ಮದ್ದಳೆ, 5 ಚಂಡೆಯ
ಪ್ರಯೋಗಗಳಾದವು. “ಕೀಚಕ ಕೀಚಕ ಕೀಚಕ ” “ಕೌರವ ಕೌರವ ಕೌರವ ” ಮುಂತಾದ ಸ್ಪರ್ಧೆಯ ಆಟಗಳು

ನಡೆದವು. 2 ಅಟ್ಟ 3 ಅಟ್ಟದ ಆಟಗಳು ನಡೆದವು. ಸಾಕ್ಷಾತ್ ಗರುಡನ ಮೇಲೆ ವಿಷ್ಣುವಿನ ಪ್ರವೇಶ ಮುಂತಾದ ಗಿಮಿಕ್ಸುಗಳು ನಡೆದವು. ಆಮೇಲೆ ಹೊಸ ಪ್ರಸಂಗಗಳ ಸುಗ್ಗಿ ಆರಂಭವಾಯಿತು. ಮೊದ ಮೊದಲು ಯಕ್ಷಗಾನೀಯ ಆವರಣದಲ್ಲಿಯೇ ಹೊಸ ಪ್ರಸಂಗಗಳು ನಡೆದು ಜನಪ್ರೀಯತೆಯನ್ನು ಗಳಿಸಿದರೂ ಬರಬರತ್ತಾ ದ್ವಂದ್ವಾರ್ಥದ
ಹಾಸ್ಯಗಳು ಸಿನೇಮಾ ಶೈಲಿಯ ಹಾಡುಗಳೇ ತುಂಬಿ ಹೋಗಿ ಈಗ ಡಬ್ಲ್ಯು ಡಬ್ಲ್ಯು ಎಫ್ ವರೆಗೂ ರಂಗಕ್ಕೆ ಬಂದು ನಿಂತಿದೆ. ಆಗಲೇ ಹೇಳಿದ ಹಾಗೆ ಯಕ್ಷಗಾನದಲ್ಲಿ ಕಲಾವಿದರು ಎಷ್ಟಿದ್ದಾರೊ ಅದಕ್ಕಿಂತ ಹೆಚ್ಚು ಪ್ರಸಂಗಗಳಿವೆ. ಹೆಚ್ಚಿನಪ್ರಸಂಗಗಳು ಇನ್ನೂ ಪ್ರದರ್ಶನ ಭಾಗ್ಯಕಂಡಿಲ್ಲ. ಹೀಗಿರುವಾಗ ಹೊಸ ಪ್ರಸಂಗಗಳ ಅಗತ್ಯವಾದರೂ ಎಲ್ಲಿ? ಒಂದು ವೇಳೆ ಹೊಸ ಪ್ರಸಂಗವನ್ನು ತರುವದಿದ್ದರೂ ಅದನ್ನು ಯಕ್ಷಗಾನಾರ್ಹವಾಗಿಸಿ ರಂಗಕ್ಕೆ ತನ್ನಿ. ಇದು
ನನ್ನ ವಿನಂತಿ. ಸ್ವಾರಸ್ಯದ ಸಂಗತಿಯೆಂದರೆ ಏನೇ ಮಸಾಲೆ ತುರುಕಿದರೂ ಈಗ ಹೊಸ ಪ್ರಸಂಗಗಳಿಗೆ ಪ್ರೇಕ್ಷಕರ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಡೇರೆ ಮೇಳಗಳ ಸಂಖ್ಯೆಯೂ ಈಗ 2 ಕ್ಕೆ  ಇಳಿದಿದೆ. ಇದೇ ಒಂದು ಆಶಾದಾಯಕ ಬೆಳವಣಿಗೆ.


4 ) ಕಲೆಯನ್ನೂ ಮೀರಿ ಬೆಳೆದ ಕಲಾವಿದರು:


ಈ ವಿಷಯವನ್ನು ಪ್ರಸ್ಥಾಪಿಸುವಾಗ ನನ್ನ ಬಾಲ್ಯದ ದಿನಗಳಲ್ಲಿ ನಡೆದ ಒಂದು ಘಟನೆ ನೆನಪಾಗುತ್ತದೆ. ಅಂದು ಹೊಸಾಕುಳಿ ಜಾತ್ರೆಯ ಪ್ರಯುಕ್ತ ಅಮೃತೇಶ್ವರಿ ಮೇಳದ ಆಟ. ಎರಡು ಪ್ರಸಂಗಗಳು. ಮೊದಲ ಪ್ರಸಂಗ ಈಗ ನೆನಪಿನಲ್ಲಿಲ್ಲ. ಎರಡನೆಯ ಪ್ರಸಂಗ ಗದಾಯುದ್ಧ. ಚಿಟ್ಟಾಣಿಯವರ ಕೌರವ. ಬೆಳಗಿನ ಜಾವ 5 ಘಂಟೆಯಾದರೂ ಚಿಟ್ಟಾಣಿಯವರ ಕೌರವನ ಪ್ರವೇಶ ಆಗಲಿಲ್ಲ.ಜನರೆಲ್ಲ ಎದ್ದು ನಿಂತು ಪ್ರತಿಭಟಿಸುವುದಕ್ಕೆ ಆರಂಭಿಸಿದರು. ಕೃಷ್ಣನ ಪಾತ್ರಧಾರಿ ಉಳಿದ ಪಾತ್ರಧಾರಿಗಳಿಗೆ  ಪ್ರಸಂಗವನ್ನು ಮುಂದುವರಿಸುವುದಕ್ಕೆ ಹೇಳಿದರು.ಜನರೆಲ್ಲ ಕಲ್ಲುಗುಂಡುಗಳನ್ನು ಹಿಡಿದು ರಂಗಸ್ಥಳದತ್ತ ನುಗ್ಗಿ ಕಲಾವಿದರನ್ನು ಬೆದರಿಸಿ ಒಳಗೆ ಕಳಿಸಿದರು.ಆ ಕಲಾವಿದರ ಪರಿಸ್ಥಿತಿ ಏನಾಗಿರಬೇಡ. ಅಂತೂ ಅಕಾಲ ಪ್ರಸವ ಆದ ಹಾಗೆ ಚಿಟ್ಟಾಣಿಯವರ ಕೌರವನ ಪ್ರವೆಶವಾಯಿತು.ಆವಾಗ ನಾನೂ ಸಂತೋಷ ಪಟ್ಟಿದ್ದೆ. ಕಥಾಭಾಗ ಅಲ್ಲಿಯವರೆಗೆ ಮುಟ್ಟಿರಲಿಲ್ಲ. ಈಗ ವಿಚಾರ ಮಾಡಿದರೆ ಇದು ಎಂಥಾ ಅಪಾಯಕಾರಿ ಬೆಳವಣಿಗೆ ಎಂಬುದು ಅರ್ಥವಾಗಿ ಮನಸ್ಸಿಗೆ  ತುಂಬಾ ವ್ಯಥೆಯಾಗುತ್ತದೆ.ಕಲೆಗಿಂತಲೂ ದೊಡ್ಡವರು ಯಾರೂ ಅಲ್ಲ, ಕಲಾವಿದರಿಗೆ ತಾರಾ ಮೌಲ್ಯ ಬರುತ್ತಿದ್ದ ಹಾಗೆ ತಾನು ಆಡಿದ್ದೇ ಮಾತು ಮಾಡಿದ್ದೇ ಶಾಸನ ಅನ್ನುವಂಥ ವಾತಾವರಣ ನಿರ್ಮಾಣವಾಗುವುದಕ್ಕೆ ಆರಂಭವಾಯಿತು. ಅವನೆದುರಿಗೆ ಪಾತ್ರ ಮಾಡುವುದಿಲ್ಲ ಇವನೆದುರಿಗೆ ಪಾತ್ರ ಮಾಡುವುದಿಲ್ಲ ಎಂಬ ಮೊಂಡಾಟ ಶುರುವಾಯಿತು. ತತ್ಪರಿಣಾಮವಾಗಿ ಯಕ್ಷಗಾನ ರಂಗಭೂಮಿಯ ಅನೇಕ ಸಾಧ್ಯತೆಗಳು ಮುಕ್ಕಾಗಿಹೋದವು. ಸ್ವ ಪ್ರತಿಷ್ಠೆಯೇ ಪ್ರಧಾನವಾಯ್ತು. ಯಕ್ಷಗಾನ ಏನಾದರೂ ಆಗಲಿ ತಾನು ಗೆಲ್ಲಬೇಕು ಎನ್ನುವ ಜಿದ್ದಾ ಜಿದ್ದಿ ಪ್ರಾರಂಭವಾಯ್ತು. ಇದರ ಪರಿಣಾಮವಾಗಿ ತುಂಡು ತುಂಡು ಕಲಾ ತಂಡಗಳು ಅಸ್ಥಿತ್ವಕ್ಕೆ ಬಂದವು. ಪ್ರಬಲ ಎದುರಾಳಿಗಳಿಲ್ಲದೇ ‘ ಅಳ್ದೂರೀಗ್ ಉಳ್ದವ್ನೆ ಗೌಡ’ ಎನ್ನುವಂಥ ವಾತಾವರಣ ನಿರ್ಮಾಣ ಆಯ್ತು. ಕಾಲಮಿತಿ ಪ್ರಯೋಗದಲ್ಲಿ ಉಳಿದವರ ನಿರ್ವಹಣೆಗೆ ಕಾಲಮಿತಿಯಾಯ್ತೇ ವಿನ: ಮೇಳದ ಮುಖ್ಯ ಕಲಾವಿದನಿಗೆ ಕಾಲಮಿತಿಯಿಲ್ಲ. ಇಡಿಯಾಗಿ ಪ್ರೇಕ್ಷಕನಿಗೆ ತಲುಪುವುದಕ್ಕೆ ಬದಲಾಗಿ ಬಿಡಿ ಬಿಡಿಯಾಗಿ ತಲುಪುವುದಕ್ಕೆ ಪೈಪೋಟಿ. ಕಲಾವಿದರಿಗೆ ಬೇಡಿಕೆ ಹೆಚ್ಚಾಗಿ ಈಗ ಮತ್ತೊಂದು ಕೆಟ್ಟ ಪರಂಪರೆ ಶುರುವಾಗಿದೆ. ಒಂದೇ ದಿವಸ  3-4 ಆಟಕ್ಕೆ ಒಪ್ಪಿಕೊಂಡು ಎಲ್ಲಿಯೂ ನ್ಯಾಯವೊದಗಿಸದೇ ದುಡ್ಡು ಎಣಿಸುವುದು. ಕಲೆ ಏನಾದರೂ ಆಗಿ ಹೋಗಲಿ ತಾನು ಮಿಂಚಬೇಕು ಎನ್ನುವ ಪ್ರವೃತ್ತಿ ಸರ್ವತ್ರವಾಗಿದೆ.


5 ) ಪ್ರೇಕ್ಷಕರ ಅಲ್ಪ ತೃಪ್ತಿ:

ಇಡಿಯಾಗಿ ಆಟ ನೋಡುವ ಪ್ರವೃತ್ತಿ ಪ್ರೇಕ್ಷಕರಲ್ಲೂ ಮಾಯವಾಗಿದೆ.ಎರಡು ಪದ್ಯ ಚೆನ್ನಾಗಿ ಹಾಡಿದರೆ, ಒಂದು ಪದ್ಯಕ್ಕೆ ಚೆನ್ನಾಗಿ ಕುಣಿದರೆ, ಎರಡು ಮಾತು ಚೆನ್ನಾಗಿ ಆಡಿದರೆ ಕೊಟ್ಟ ದುಡ್ಡು ಬಂತು ಎಂದು ಸಂಭ್ರಮಿಸುವ ನೋಡುಗರು ಇರುವವರೆಗೆ ಆಡುವ ಆಟಗಳಿಗೂ ಕೊನೆಯಿರಲಾರದು.  ಇಷ್ಟೆಲ್ಲ ಆಧುನಿಕ ಸೌಕರ್ಯಗಳಿದ್ದು, ಸಮರ್ಥ ಕಲಾವಿದರಿದ್ದೂ ಯಕ್ಷಗಾನ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲವಾಗುತ್ತಿದೆ. ಇತ್ತೀಚೆಗೆ 2-3
ಬಯಲಾಟವನ್ನು ನೋಡುವ ಸಂದರ್ಭ ಒದಗಿ ಬಂತು. ಅಂತಹ ಹೆಸರುವಾಸಿ ಕಲಾವಿದರಾರೂ ಇರಲಿಲ್ಲ. ನೋಡುತ್ತಾ ಕುಳಿತವನಿಗೆ ಮಂಗಲ ಪದ್ಯ ಹಾಡಿದಾಗಲೇ ಗೊತ್ತಾದದ್ದು ಆಟ ಮುಗಿಯಿತು ಎಂದು. ಅಷ್ಟು ತನ್ಮಯತೆಯಿಂದ ಆಟ ನೋಡಿದೆ. ಆದರೆ ಮೇಳದ ಆಟದಲ್ಲಿ ಮಹ ಮಹಾ ಕಲಾವಿದರಿದ್ದರೂ ಕಷ್ಟ ಪಟ್ಟು ನೋಡಬೇಕು. ಮೈ ಮರೆಯುವುದಿಲ್ಲ. ಯಾಕೆ ಹೀಗೆ? ವಿಚಾರ ಮಾಡಬೇಕಾದ ಅಂಶ ಇದೆ ಇದರಲ್ಲಿ. ಹಿರಿಯ ಕಲಾವಿದ ದಿವಂಗತ ಹಡಿನಬಾಳ ಸತ್ಯ ಹೆಗಡೆಯವರು ಹೇಳುತ್ತಿದ್ದ ಒಂದು ಮಾತು ಇಲ್ಲಿ ನನಗೆ ನೆನಪಾಗುತ್ತಿದೆ.


ಅವರ ಕಾಲದಲ್ಲಿ ಆಟಕ್ಕೆ ಹೋದಾಗ ಕವಳ ಹಾಕಬೇಕೆಂದು ಎಲೆಯ ಸೆರೆಯನ್ನು ತೆಗೆದರೆ ಅದು ಕೈಯ್ಯಲ್ಲೇ ಇರುತ್ತಿತ್ತು; ಬೆಳಗಾಗಿ ಹೋಗುತ್ತಿತ್ತು ಎನ್ನುವುದಾಗಿ.ನನ್ನ ಬಾಲ್ಯದಲ್ಲಿ ಅಂಥ ಆಟಗಳನ್ನು ನಾನೂ ನೋಡಿದ್ದೇನೆ. ‘ಒಡವೆಯಿದ್ದೂ ಬಡವೆ’ ಯಾಗುವ ಈ ಪಾಡು ಯಕ್ಷಗಾನಕ್ಕೆ ಯಾಕೆ ಬಂತು? ಹೇಗೆ ಬಂತು? ಎನ್ನುವ ಹುಡುಕಾಟವೇ ಈ ಪ್ರಬಂಧ. ಬಹುಶ: ತೆಂಕು ತಿಟ್ಟು ನಡು ತಿಟ್ಟುಗಳಲ್ಲಿಯೂ ಇದಕ್ಕಿಂತ ಭಿನ್ನವಾದ ಪರಿಸ್ಥಿತಿ ಇರಲಾರದು ಎಂಬನನ್ನ ಅನಿಸಿಕೆಯೊಂದಿಗೆ ಈ ಪ್ರಬಂಧಕ್ಕೆ ಪೂರ್ಣ ವಿರಾಮವಿಡುತ್ತಿದ್ದೇನೆ. ವಿಚಾರಗಳಿಗಲ್ಲ . 


 ‘ಯಕ್ಷಗಾನಂ ಗೆಲ್ಗೆ ಯಕ್ಷಗಾನಂ ಬಾಳ್ಗೆ’
‘ಯಕ್ಷಗಾನ’ ವ್ಯವಸಾಯ ಕುರಿತಾದ ಈ ವಿಶೇಷ ಲೇಖನ ಆರು ಕಂತುಗಳಲ್ಲಿ ಪ್ರಕಟವಾಗಿದ್ದು
ಇದೀಗ ಮುಗಿಯಿತು. ಪ್ರತಿಕ್ರಿಯೆಗಳಿದ್ದಲ್ಲಿ 9448438472 ಈ ನಂಬರಿಗೆ ವಾಟ್ಸಾಪ್

ಗಣಪತಿ ಹೆಗಡೆ ಕೊಂಡದಕುಳಿ,ಕುಮಟಾ
ಕವಿ, ಹವ್ಯಾಸಿ ಯಕ್ಷಗಾನ ಕಲಾವಿದ

Leave a Reply

Your email address will not be published. Required fields are marked *