ಕೊಳೆತ ಹೆಣಗಳನ್ನೆಲ್ಲ
ತೊಳೆದು ಶುದ್ಧಿಸುವಂತೆ
ಆತ್ಮಶುದ್ಧಿಗೆ ಇದು
ಕವಿತೆಯಂತೆ
ಯಾರ್ಯಾರೋ ಬಿಟ್ಟುಹೋದ
ಒಣಗಿದ ಗುಲಾಬಿ ಚೂರು
ಅದರೊಂದಿಗಿಷ್ಟು
ಒಡೆದ ಗಾಜಿನ ಬಳೆ
ನೆತ್ತರು ಕರೆಗಟ್ಟಿದ ಹೆಬ್ಬೆರಳಿನ ಕಲೆ
ಸುಳಿದಾಡುವ ನರುಗಂಪಿನ
ನೆರಿಗೆಯ ನಯ
ಕಚಗುಳಿಯಿಟ್ಟ ಒದ್ದೆಮೈ
ಮಲ್ಲಿಗೆಯ ಮನಸು
ಬೆಳ್ಳನೆಯ ನಗು
ಹೆಗಲಾದ ಹಗಲು
ಕನಸಾದ ರಾತ್ರಿ
ಲೆಕ್ಕವಿಲ್ಲದಷ್ಟು ಹೆಜ್ಜೆಗಳು
ಅಳಿಸಿಹೋದ ಬಂದರು
ಅದೊಂದೆ ಉಳಿದುಹೋದ
ಗೆಜ್ಜೆಯ ಜಣಿರು
ಎಲ್ಲ ತೊಳೆದುಬಿಡು ಒಮ್ಮೆ
ಕವಿತೆಯೆಂಬ ಗಂಗೆಯಲ್ಲಿ
ಪವಿತ್ರವಾಗಲೀ ಆತ್ಮ
ಹೊಸಹುಟ್ಟು ಜರುಗಲೀ..

–ಪ್ರಿಯಾ ಭಟ್ ಕಲ್ಲಬ್ಬೆ, ‘ಐಸಿರಿ’, ಕುಮಟಾ