ಆಗೆಲ್ಲ ಹೊನ್ನಾವರದ ದುರ್ಗಾಕೇರಿಯಲ್ಲಿನ ಆ ಶಾಲೆಗೆ ಜನ ಸಾಮಾನ್ಯರು ‘ನೆಮಿ ಕನ್ನಡ ಶಾಲೆ’ ಅಂತಲೇ ಕರೆಯುತ್ತಿದ್ದರು. ಎನ್.ಎಂ.ಎಸ್.ಶಾಲೆ ಅದರ ಬೋರ್ಡು. ನಾನು ಮೂರು ಮತ್ತು ನಾಲ್ಕನೇ ತರಗತಿ ಓದಿದ್ದು ಅಲ್ಲೇ.
ಕರ್ಕಿಕೋಡಿಯಿಂದ ಈ ಪೇಟೆ ಶಾಲೆಗೆ ಸುಮಾರು ಎರಡು ಕಿ.ಮಿ.ಯಷ್ಟು ದೂರ. ನಾನು ಮತ್ತು ನನ್ನ ತಂಗಿ ಅನ್ನಪೂರ್ಣ, ಜೊತೆಗೆ ನಮ್ಮೂರಿನಿಂದ ಕೆಲ ಮಕ್ಕಳು ಶಾಲೆಗೆ ನಡೆದು ಕೊಂಡೇ ಹೋಗಿ ಬರುತ್ತಿದ್ದೆವು.
ಶಾಲೆಗೆ ಹತ್ತಿರದಲ್ಲೇ ದುರ್ಗಾಕೇರಿ ದಾಟುತ್ತಿದ್ದಂತೆ ಒಂದು ಹಳ್ಳ ಸಿಗುತ್ತದೆ. ಹಳ್ಳಕ್ಕೆ ‘ಬಾಂದೇಹಳ್ಳ’ ಕರೆಯುತ್ತಾರೆ. ಹಳ್ಳಕ್ಕೊಂದು ಸೇತುವೆ. ಅದು ಬಾಂದೇಹಳ್ಳ ಬ್ರಿಜ್ಜು (Bandehalla Bridge). ನಿತ್ಯ ಬೆಳಿಗ್ಗೆ ಮತ್ತು ಮಧ್ಯಾಹ್ನ ಅಂತ ನಾವು ನಾಲ್ಕು ಬಾರಿ ಅದೇ ದಾರಿಯಲ್ಲಿ, ಅದೇ ಬಾಂದೇಹಳ್ಳ ಬ್ರಿಜ್ಜಿನ ಮೇಲಿಂದಲೇ ತಿರುಗಾಡುತ್ತಿದ್ದೆವು.
ನಮಗೆಲ್ಲ ಆ ಚಿಕ್ಕ ವಯಸ್ಸಿನಲ್ಲಿ ಬಾಂದೇಹಳ್ಳ ಬ್ರಿಜ್ಜು ದಾಟಿ ಶಾಲೆಗೆ ಹೋಗಿ ಬರುವಾಗೆಲ್ಲ ಒಂಥರ ಅವ್ಯಕ್ತ ಭಯ. ಶಾಲೆ ಬಿಟ್ಟು ಮನೆಗೆ ಹೋಗುವಾಗ ಉಪಾಯ ಮಾಡಿ ನಮ್ಮ ಹೆಡ್ ಮಿಸ್ಸು ಸಾರಮ್ಮ ಕೈರನ್ ಟೀಚರ್ ಅವರ ಬೆನ್ನಿಗೇ ಹೋಗುತ್ತಿದ್ದೆವು. ಸಾರಮ್ಮಾ ಮಿಸ್ ಮನೆಗೆ ಹೋಗುವುದು ಕೂಡ ನಾವು ಹೋಗುವ ದಾರಿಯಲ್ಲೇ. ಇನ್ನೂ
ಏನೆಂದರೆ ಆಗ ಬಾಂದೇಹಳ್ಳ ಪಕ್ಕದಲ್ಲಿ ಹಾದು ಹೋಗುವಾಗ ಭಯ ಅಷ್ಟೇ ಅಲ್ಲ, ವಿಪರೀತ ಕೆಟ್ಟ ವಾಸನೆ ರಾಚುತ್ತಿತ್ತು, ಮೂಗು ಹಿಡಿದುಕೊಂಡೇ ಬಾಂದೇಹಳ್ಳ ಬ್ರಿಜ್ಜು ದಾಟಬೇಕಾಗಿತ್ತು.
ಬಾಂದೇಹಳ್ಳ ಅಂದ್ರೆ ಯಾಕೆ ಭಯ? ಯಾಕೆ ಅಲ್ಲಿ ಕೆಟ್ಟ ವಾಸನೆ? ಅದು ಸಣ್ಣ ನೀರಿನ ತೊರೆ. ಕೊನೆಗದು ಹತ್ತಿರವೇ ಇದ್ದ ಸಮುದ್ರ ಸೇರುತ್ತದೆ. ಹಳ್ಳದ ಮಧ್ಯೆ ಮಧ್ಯೆ ಜಾಲಿಮುಳ್ಳಿನ ಗಿಡಗಳ ಹಿಂಡು. ಭರತ-ಇಳಿತಗಳಲ್ಲಿ ಹಳ್ಳದುದ್ದಕ್ಕೂ ನೀರು ಏರುವುದು ಇಳಿಯುವುದು ಇದ್ದದ್ದೇ. ನನಗೆ ಆ ದಿನಗಳಲ್ಲಿ ಬಾಂದೇಹಳ್ಳ ಒಂದು ರೀತಿಯಲ್ಲಿ
ನಿಗೂಢವಾಗಿಯೇ ಕಾಣುತ್ತಿತ್ತು. ಯಾಕೆಂದರೆ ಆ ಹಳ್ಳದಲ್ಲಿ ಹೆಚ್ಚುಕಡಿಮೆ ನಿತ್ಯವೂ ಒಂದಲ್ಲ ಒಂದು ಸತ್ತ ಎಮ್ಮೆ ಕರುವಿನ ಕಳೇಬರ ಹೊಟ್ಟೆ ಉಬ್ಬಿಸಿಕೊಂಡು, ಕಣ್ಣು ಗುಡ್ಡೆ ಹೊರ ಚೆಲ್ಲಿಕೊಂಡು ತೇಲಿ ಬರುತ್ತಿತ್ತು ಅಥವಾ ಯಾವುದಾದರೂ ಜಾಲಿಮುಳ್ಳಿನ ಹಿಂಡುಗಳಿಗೆ ತಗುಲಿಕೊಂಡು ಅಲ್ಲಿಯೇ ಕೊಳೆತು ನಾರುತ್ತಿತ್ತು. ಹೀಗಾಗಿ ಬಾಂದೇ ಹಳ್ಳದ ರಸ್ತೆ ಮೇಲೆ ಓಡಾಡುವಾಗೆಲ್ಲ ಕೆಟ್ಟ ವಾಸನೆ ಹರಡಿಕೊಳ್ಳುತ್ತಿತ್ತು.
ಶಾಲೆಗೆ ಹೋಗುವಾಗ ‘ಇವತ್ತು ಬಾಂದೇಹಳ್ಳದಲ್ಲಿ ಯಾವುದೇ ಸತ್ತ ಎಮ್ಮೆ ಕರು ತೇಲಿಕೊಂಡು ಬರದಿರಲಿ ದೇವರೇ’ ಎಂದು ಬಾಂದೇಹಳ್ಳಕ್ಕಿಂತ ಸ್ವಲ್ಪವೇ ಹಿಂದೆ ದಾರಿ ಮಧ್ಯೆ ಸಿಗುವ ಅಶ್ವತ್ಥ ಕಟ್ಟೆಯ ಮೇಲೆ ಪುಟ್ಟ ಗೂಡಿನಲ್ಲಿ ನಿಂತ ಕೆಂಪು ಹನುಮಂತನಲ್ಲಿ ಬೇಡಿಕೊಳ್ಳುತ್ತಿದ್ದೆ. ಆದರೆ ಹನುಮಂತನಿಗೆ ನನ್ನ ಮೊರೆ ಕೇಳಿಸುತ್ತಿರಲಿಲ್ಲ ಅನಿಸುತ್ತದೆ.
ಹಳ್ಳದ ಪಕ್ಕ ನಡೆದು ಹೋಗುವಾಗ ಕಣ್ಣು ಬೇಡವೆಂದರೂ ಆ ಕಡೆಯೇ ಹೋಗುತ್ತಿತ್ತು. ‘ದುರಾದೃಷ್ಟಕ್ಕೆ’ ಭರತವಾದರೆ ತುಂಬಿಕೊಂಡ ಬಾಂದೇಹಳ್ಳದ ಆ ಹಸಿರು ನೀರಿನಲ್ಲಿ ಹೊಟ್ಟೆ ಉಬ್ಬಿಸಿಕೊಂಡು, ಕಣ್ಣುಗುಡ್ಡೆ ಹೊರ ಚೆಲ್ಲಿಕೊಂಡ ಎಳೆ ಎಮ್ಮೆಕರು ಸೇತುವೆಯತ್ತ ತೇಲಿ ಬರುತ್ತಿತ್ತು. ಇಳಿತವಾದರೆ ಅಲ್ಲೆಲ್ಲೋ ಜಾಲಿಗಿಡಕ್ಕೆ ಸಿಕ್ಕಿಕೊಂಡಿರುತ್ತಿತ್ತು. ಹದ್ದುಗಳು, ಕಾಗೆಗಳು ಅದನ್ನು ಕುಕ್ಕುತ್ತಿತ್ತು.
ಈ ಎಳೆಕರು ಎಲ್ಲಿಂದ ತೇಲಿ ಬರುತ್ತಿತ್ತು? ಯಾಕಾಗೆ ಹಾಗೆ ಸಾಲು ಸಾಲಾಗಿ ಬರುತ್ತಿತ್ತು? ಹೊನ್ನಾವರದಲ್ಲಿ ಆ ದಿನಗಳಲ್ಲಿ ತುಂಬ ಎಮ್ಮೆಪೈಲುಗಳಿದ್ದವು. ಎಮ್ಮೆಪೈಲು ಅಂದರೆ ಹೊನ್ನಾವರದ ಜನಕ್ಕೆ ಗೊತ್ತಾಗುತ್ತದೆ. ಹೊರಗಿನವರಿಗಾಗಿ ಹೇಳುವುದಾದರೆ- ಸುಮಾರು ಹದಿನೈದು ಇಪ್ಪತ್ತು ಎಮ್ಮೆಗಳನ್ನು, ಕೆಲವೆಡೆ ಮುವತ್ತು ನಲವತ್ತು ಎಮ್ಮೆಗಳನ್ನು ಒಂದೇ ಕಡೆ ಕಟ್ಟಿ ಸಾಕಿ, ಅದರಿಂದ ಬರುವ ಲೀಟರುಗಟ್ಟಳೆ ಹಾಲನ್ನು ಮಾರಾಟ ಮಾಡುವ
ಕೊಟ್ಟಿಗೆ. ಎಮ್ಮೆಪೈಲು ಅಂದೆ ಎಮ್ಮೆಗಳ ಹಿಂಡು ಅಂತಲೂ ಅರ್ಥ ಇದೆ.
ಹೀಗೆ ಎಮ್ಮೆಗಳನ್ನು ಸಾಕಿ ಉದ್ಯೋಗ ಮಾಡುತ್ತ ಬದುಕು ಕಟ್ಟಿಕೊಂಡು ಹೈನುಗಾರಿಕೆಯನ್ನೇ ಜೀವಾಳ ಮಾಡಿಕೊಂಡ ಒಂದಿಷ್ಟು ಶ್ರಮಿಕ ಕುಟುಂಬಗಳು ಹೊನ್ನಾವರದಲ್ಲಿ ಆ ದಿನಗಳಲ್ಲಿ ಇದ್ದವು. ಈ ಎಮ್ಮೆ ಪೈಲಿನಲ್ಲಿ ಒಂದಿಲ್ಲ ಒಂದು ಎಮ್ಮೆ ಸಹಜವಾಗಿಯೇ ‘ಗಬ್ಬ’ ಆಗಿರುತ್ತದೆ ಅಂದರೆ ಗರ್ಭ ಕಟ್ಟಿರುತ್ತದೆ. ಆ ಎಮ್ಮೆಗಳಿಗೆ ನಿಸರ್ಗ
ಕ್ರಿಯೆಯಂತೆ ಗಬ್ಬ ಮಾಡಿಸುವುದೇ ಇಲ್ಲ. ಪಶು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಕೃತಕ ಗರ್ಭ ಧಾರಣೆಯನ್ನು ಮಾಡಿಸುತ್ತಾರೆ. ಅಥವಾ ಮನೆಗೇ ಪಶುವೈದ್ಯರನ್ನು ಕರೆಸಿ ಇಂಜಕ್ಷನ್ ಮೂಲಕ ಗರ್ಭಧಾರಣೆ ಮಾಡಿಸುತ್ತಾರೆ. ಯಾಕೆಂದರೆ ಆ ಎಮ್ಮೆಗಳನ್ನೆಲ್ಲ ಮೇಯಲು ಬಯಲಿಗೆ ಬಿಡುವುದೇ ಇಲ್ಲ. ಹೀಗಿದ್ದ ಮೇಲೆ ಅದು ನಿಸರ್ಗ ಸಹಜವಾಗಿ ಗರ್ಭಧಾರಣೆಯಾಗುವುದಾದರೂ ಹೇಗೆ? ಎಮ್ಮೆ ಪೈಲಿನಲ್ಲಿದ್ದ ಎಮ್ಮೆಗಳ ಮೈ ಮೇಲೆ ಬಿಸಿಲು ಬೀಳದೇ ಅದು ಊರ ಎಮ್ಮೆಯಂತೆ ಕಪ್ಪಗಿರದೇ ಬಿಳಿ ಬಿಳಿಯಾಗಿಯೇ ಇರುವುದು ಹೆಚ್ಚು.
ಈ ಎಮ್ಮೆಪೈಲನ್ನೇ ನಂಬಿ ಬದುಕುವ ಜನರಿಗೆ ಹೆಣ್ಣು ಎಮ್ಮೆ ಬೇಕೇ ಹೊರತು ಗಂಡು ಎಮ್ಮೆಯ ಅಗತ್ಯವಿಲ್ಲ. ಅವರಿಗೆ ಬೇಕಿರುವುದು ಹೆಣ್ಣು ಎಮ್ಮೆ ಕರು ಮಾತ್ರ. ಪೈಲ್ ನಲ್ಲಿದ್ದ ಎಮ್ಮೆ ಹೆಣ್ಣು ಕರುವಿಗೆನ ಜನ್ಮ ನೀಡಿದರೆ ಅದಕ್ಕೆ ವಿಶೇಷ ಕಾಳಜಿಯಿಂದ ಸ್ನಾನ ಮಾಡಿಸಿ, ಆ ಎಳೆ ಕರುವಿನ ಮೇಲೆ ಅಕ್ಕಿ ಧೂಳು ಬೀರಿ ತಾಯಿ ಎಮ್ಮೆಗೆ ನೆಕ್ಕಲು ಬಿಡುತ್ತಾರೆ. ಅಲ್ಲದೇ ತಾಯಿ ಎಮ್ಮೆಯ ಮೊದಲ ಹಾಲನ್ನು ಕುಡಿಸಲು ಅದರ ಕೆಚ್ಚಲಿನ ಹತ್ತಿರವೇ
ಕರುವಿನ ಬಾಯಿಯನ್ನು ತೆಗೆದುಕೊಂಡು ಹೋಗುತ್ತಾರೆ. ಅಷ್ಟರ ಮಟ್ಟಿಗೆ ಮಗುವಿನಂತೆ ಹೆಣ್ಣು ಕರುವಿನ ಪಾಲನೆ ಮಾಡುತ್ತಾರೆ.
ಆದರೆ ಗಂಡು ಕರುವಿಗೆ ತಾಯಿಯ ಹುಂಡು ಹಾಲನ್ನು ಕುಡಿಯುವ ‘ಅದೃಷ್ಟ’ವೂ ಇರುವುದಿಲ್ಲ. ಅದು ಗರ್ಭದಿಂದ ಭೂಮಿಗೆ ಬಿದ್ದ ತಕ್ಷಣ ತಾಯಿಯಿಂದ ಬೇರ್ಪಡಿಸಿ ಮೂಲೆಗೆ ಎಸೆಯುತ್ತಾರೆ. ಅದು ಆಗಷ್ಟೇ ಕಣ್ಣು ಬಿಟ್ಟು ನಾಲ್ಕೂ ಕಾಲುಗಳನ್ನು ಚಾಚಿ ನಿಲ್ಲಲು ಪ್ರಯತ್ನಿಸುತ್ತದೆ. ಆದರೆ ತಾಯಿಯ ಹಾಲು ಬೀಳುವುದು ಇರಲಿ, ಹುಂಡು ನೀರು ಕೂಡ ಸಿಗುವುದಿಲ್ಲ. ಆ ಗಂಡುಕರುವಿನೊಳಗಿನ ಚೈತನ್ಯ ಕೂಡ ಬತ್ತಿ ಹೋಗಿರುತ್ತದೆ. ಅದು ಎಷ್ಟೇ ಕೂಗಿಕೊಂಡರೂ ಅದರತ್ತ ಯಾರೂ ಕಣ್ಣೆತ್ತಿ ಕೂಡ ನೋಡುವುದಿಲ್ಲ. ಇತ್ತ ತಾಯಿ ಎಮ್ಮೆ ಕೂಡ ತನ್ನ ಕಂದಮ್ಮನನ್ನು ನೋಡಲು, ಅದರ ಮೈ ನೆಕ್ಕಲು, ಹಾಲುಣಿಸಲು ಕೂಗುತ್ತಲೇ ಇರುತ್ತದೆ. ಆದರೆ ದೂರದಲ್ಲೆಲ್ಲೋ ತನ್ನ ಗಂಡು ಕರುವಿನ ಕೂಗು, ಆಕ್ರಂದನ ಕೇಳುತ್ತದೆಯೇ ಹೊರತು ಅದನ್ನು ನೋಡಲು ಆಗುವುದಿಲ್ಲ. ಒಂದೆರಡು ದಿನಗಳಲ್ಲೇ ಆ ‘ನತದೃಷ್ಟ’ ಗಂಡು ಕರು ಉಸಿರು ಚೆಲ್ಲಿ ಸೆಟೆದುಕೊಂಡಾಗ ಮಾಲಕ ಅದನ್ನು ಬಾಂದೆಹಳ್ಳಕ್ಕೆ
ಎಸೆಯುತ್ತಾನೆ. ಆದರೆ ಅಪ್ಪಿ ತಪ್ಪಿಯೂ ಆ ಜೀವಂತ ಕರುವನ್ನು ಬಾಂದೇ ಹಳ್ಳಕ್ಕೆ ಎಸೆಯುವುದಿಲ್ಲ. ಹಾಗೆ ಎಸೆದರೆ ಅದು ಈಜಿ ದಡ ಸೇರಬಹುದು ಎಂಬ ಕಾರಣಕ್ಕೆ ಅದನ್ನು ಸಾಯಿಸಿಯೇ ಹಳ್ಳಕ್ಕೆ ಎಸೆಯುತ್ತಿದ್ದರು. ಅನಂತರ ಆ ಕರುವಿನ ಕಳೆಬರದಲ್ಲಿ ನೀರು,ಗಾಳಿ ತುಂಬಿ ಹೊಟ್ಟೆ ಉಬ್ಬಿ ತೇಲುತ್ತ ತೇಲುತ್ತ ಬಾಂದೇಹಳ್ಳದ ಬ್ರಿಜ್ಜಿನಡಿ ಸಾಗಿ ಬಹುಶ: ಸಮುದ್ರ ಸೇರುತ್ತಿತ್ತು. ನಡುಮಧ್ಯೆ ಹದ್ದು ಕಾಗೆಗಳಿಗೂ ಆಹಾರವಾಗುತ್ತಿತ್ತು. ನಮ್ಮಂಥ ಮಕ್ಕಳಿಗೆ ಭಯ ಪಡಲೂ ನೆಪವಾಗುತ್ತಿತ್ತು.
ಈಗ ನನ್ನನ್ನು ಪದೇ ಪದೇ ಕಾಡುವುದು ಏನೆಂದರೆ ಏನೂ ಅರಿಯದ ಆ ಗಂಡು ಎಮ್ಮೆ ಕರುವಿಗೆ ಈ ರೀತಿಯ ಕ್ರೂರ ಸಾವು ನ್ಯಾಯವೇ? ಹೈನುಗಾರಿಕೆಯನ್ನೇ ನಂಬಿ ಬದುಕುವ ಆ ಮಾಲಕ ಗಂಡು ಕರುವನ್ನು ಯಾವ ಲಾಭವೂ ಇಲ್ಲದೇ ಸಾಕುವುದಾದರೂ ಹೇಗೆ? ಅದಕ್ಕೆ ಹುಲ್ಲು, ಹತ್ತಿಕಾಳು, ಹಿಂಡಿಯನ್ನೆಲ್ಲ ಯಾಕಾಗಿ ಹಾಕಬೇಕು? ಇವೆಲ್ಲ ಜಿಜ್ಞಾಸೆ ಮನಸ್ಸಿನಲ್ಲಿ ಹುಟ್ಟಿಕೊಂಡರೆ ಆಶ್ಷರ್ಯವಿಲ್ಲ.
ಪ್ರತಿ ಉದ್ಯೋಗಕ್ಕೂ ಅದರದ್ದೇ ಆದ ಚಹರೆ ಇರುತ್ತದೆ. ಅದರಂತೆ ಈ ಎಮ್ಮೆ ಹೈನುಗಾರಿಕೆ. ಇಲ್ಲಿ ಯಾರ ಬಗ್ಗೂ ಬೊಟ್ಟು ಮಾಡಿದರೆ ತಪ್ಪಾಗುತ್ತದೆ. ಅದು ಅವರ ಉದ್ಯೋಗ. ಪುಕ್ಕಟೆ ಉಪದೇಶದಿಂದ ಆ ಎಮ್ಮೆಪೈಲ್ ಮಾಲಕನ ಮತ್ತು ಅಲ್ಲಿ ಕೆಲಸ ಮಾಡುವವರ ಸಹಾಯಕರ ಹೊಟ್ಟೆ ತುಂಬುವುದಿಲ್ಲ. ಆ ದಿನಗಳಲ್ಲಿ ಪಟ್ಟಣ ಪಂಚಾಯತಿ
ಕೂಡ ಬಾಂದೇಹಳ್ಳದಲ್ಲಿ ತೇಲಿ ಬರುವ ಸತ್ತ ಎಮ್ಮೆ ಕರುವಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಸಾರ್ವಜನಿಕರೂ ಅಷ್ಟಾಗಿ ಗಮನ ಕೊಡುತ್ತಿರಲಿಲ್ಲ. ಈಗಿನಿಂತೆ ನಿರ್ಮಲ ಯೋಜನೆ ಕೂಡ ಆಗ ಇರಲಿಲ್ಲ. ಎಲ್ಲವೂ ಸಹಜವೆಂಬಂತೆ ನಡೆದುಹೋಗುತ್ತಿತ್ತು.
ಇದೀಗ ಹೊನ್ನಾವರದಲ್ಲಿ ಮೊದಲಿನಂತೆ ದೊಡ್ಡ ಪ್ರಮಾಣದಲ್ಲಿ ಎಮ್ಮೆ ಪೈಲುಗಳಿಲ್ಲ. ಬಾಂದೇಹಳ್ಳದಲ್ಲಿ ಸತ್ತ ಎಮ್ಮೆಕರುಗಳು ತೇಲಿಬರುತ್ತಿಲ್ಲ. ಅಲ್ಲಿ ಕೆಟ್ಟ ವಾಸನೆಯಿಲ್ಲ. ಆದರೆ ಈಗಲೂ ನನಗೆ ಅಪರೂಪಕ್ಕೆ ಒಮ್ಮೊಮ್ಮೆ ನಿದ್ದೆಯಲ್ಲಿ ಬಾಂದೇಹಳ್ಳದಲ್ಲಿ ಸತ್ತ ಗಂಡು ಕರು ಹೊಟ್ಟೆ ಉಬ್ಬಿ ತೇಲಿ ಬರುವಂತೆ ಕನಸಿನಲ್ಲಿ ಕಂಡು ಮೈ ಬೆವರುತ್ತದೆ.
ಲೇಖಕರು
ಅರವಿಂದ ಕರ್ಕಿಕೋಡಿ
ಪ್ರಧಾನ ಸಂಪಾದಕರು
ಹಣತೆವಾಹಿನಿ