ಕಾಸರಗೋಡು ಚಿನ್ನಾ ಸಹಿತ ಏಳು ಸಾಧಕರಿಗೆ ರಂಗಶ್ರೇಷ್ಠ ಪುರಸ್ಕಾರ ಪ್ರದಾನ

ಮಂಗಳೂರು: ಸಶಕ್ತ ರಂಗಕರ್ಮಿ, ರಾಜ್ಯ ಪ್ರಶಸ್ತಿ ಪುರಸ್ಕೃತ, ಚಲನ ಚಿತ್ರ ನಿರ್ದೇಶಕ, ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ ಅವರಿಗೆ ಡಾ. ಪಿ.ದಯನಂದ ಪೈ ಪ್ರಾಯೋಜಿತ ವಿಶ್ವ ಕೊಂಕಣಿ ಕೇಂದ್ರ ನೀಡುವ ‘ ರಂಗ ಶ್ರೇಷ್ಠ ಪುರಸ್ಕಾರ’ವನ್ನು ಇಲ್ಲಿಯ ವಿಶ್ವ ಕೊಂಕಣಿ ಸಬಾಭವನದಲ್ಲಿ ಪ್ರದಾನ ಮಾಡಲಾಯಿತು.

ವಿಶ್ವ ಕೊಂಕಣಿ ಕೇಂದ್ರ ಪ್ರದಾನ ಮಾಡಿದ ಈ ಪ್ರಶಸ್ತಿ ಒಂದು ಲಕ್ಷ ರೂ. ನಗದು, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರವನ್ನೊಳಗೊಂಡಿದೆ. ಕಾಸರಗೋಡು ಚಿನ್ನಾ ಅವರೊಂದಿಗೆ ಹಿರಿಯ ಕೊಂಕಣಿ ಕಲಾವಿದರಾದ ರಮಾನಂದ ರಾಯ್ಕರ್, ಡಾ. ಪ್ರಕಾಶ ಪೆರಿಯಂಕಾರ್, ಆರ್.ಎಸ್.ಭಾಸ್ಕರ್, ಶಕುಂತಲಾ ಎ. ಭಂಡಾರ್ಕರ್, ಜೊಸೆಫ್ ಕ್ರಾಸ್ತಾ, ರಮೇಶ್ ಲಾಡ್ ಅವರಿಗೆ ‘ರಂಗ ಶ್ರೇಷ್ಠ ಪುರಸ್ಕಾರ’ ನೀಡಿ ಪುರಸ್ಕರಿಸಲಾಯಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಮಂಗಳೂರು ವಿ.ವಿ.ಕುಲಪತಿ ಪ್ರೊ. ಜಯರಾಂ ಅಮೀನ್, ‘ಉದ್ಯಮ, ಸಾಹಿತ್ಯ, ಕಲೆ, ಸೇವೆ ಸಹಿತ ವಿವಿಧ ಕ್ಷೇತ್ರಗಳಿಗೆ ಕೊಂಕಣಿಗರು ದೇಶ ಮತ್ತು ಸಮಾಜಕ್ಕೆ ನೀಡಿರುವ ಕೊಡುಗೆ ಅನನ್ಯವಾದುದು. ಕೊಂಕಣಿ ಭಾಷೆ ಮಾತನಾಡುವ ವಿವಿಧ ಧರ್ಮ, ಜಾತಿಯ ಬಹು ಸಂಸ್ಕೃತಿ ಜೀವನ ಪದ್ಧತಿಯ ಜನ ವಿಶ್ವ ಕೊಂಕಣಿ ಕೇಂದ್ರ ಎಂಬ ಕೊಡೆಯ ಅಡಿ ಒಂದಾಗಿದ್ದಾರೆ’ ಎಂದರು.

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ, ‘ಕೊಂಕಣಿಗರು ಇಂದು ಜಾಗತಿಕ ಮಟ್ಟದಲ್ಲಿ ಅಸ್ತಿತ್ವ ಪಡೆದುಕೊಂಡಿದ್ದಾರೆ.ಕಲೆ, ಸಾಹಿತ್ಯ, ಶಿಕ್ಷಣ, ಉದ್ಯಮ ಎಲ್ಲ ಕ್ಷೇತ್ರದಲ್ಲೂ ಕೊಂಕಣಿ ಭಾಷಿಕರು ತಮ್ಮದೇ ಛಾಪು ಮೂಡಿಸಿದ್ದಾರಲ್ಲದೇ, ಯಶಸ್ಸಿನ ಮಾದರಿಗಳನ್ನು ನಿರ್ಮಿಸುತ್ತಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ಪ್ರಶಸ್ತಿ ಸ್ವೀಕರಿದ ಕಾಸರಗೋಡು ಚಿನ್ನಾ ಅವರು, ತಮ್ಮನ್ನು ಮತ್ತು ತಮ್ಮೊಂದಿಗೆ ಇತರ ಮಹನೀಯರನ್ನು ಗುರುತಿಸಿ ಪ್ರಶಸ್ತಿ ನೀಡಿ ಪುರಸ್ಕರಿಸಿದ ವಿಶ್ವ ಕೊಂಕಣಿ ಕೇಂದ್ರಕ್ಕೆ, ಪ್ರಶಸ್ತಿ ಆಯ್ಕೆ ಸಮಿತಿಗೆ ಮತ್ತು ಕೊಂಕಣಿ ಬಾಷೆ ಮತ್ತು ಸಂಸ್ಕತಿಯ ಬಗ್ಗೆ ಅತೀವ ಕಾಳಜಿ ಮತ್ತು ಅಭಿಮಾನ ಹೊಂದಿ ಪ್ರಶಸ್ತಿಗೆ ಪ್ರಾಯೋಜಕರಾದ ಪಿ. ದಯಾನಂದ ಪೈ ಅವರಿಗೆ ತುಂಬು ಹೃದಯದ ಧನ್ಯವಾದ ತಿಳಿಸಿದರು. ಈ ಪ್ರಶಸ್ತಿ ತಮ್ಮಲ್ಲಿ ಇನ್ನೂ ಹೆಚ್ಚಿನ ಉತ್ಸಾಹ ತುಂಬಿದೆ ಮಾತ್ರವಲ್ಲ, ಕೊಂಕಣಿ ಭಾಷೆ ಮತ್ತು ಸಂಸ್ಕತಿ ಉಳಿಸಲು, ಬೆಳೆಸಲು ಇನ್ನಷ್ಟು ಪ್ರಯತ್ನ ಪಡಲು ಹುರಿದುಂಬಿಸಿದೆ ಎಂದರು.

ಕೇಂದ್ರದ ಉಪಾಧ್ಯಕ್ಷರಾದ ಗಿಲ್ಬರ್ಟ್ ಡಿ’ಸೋಜ, ಡಾ.ಕಿರಣ್ ಐದೆ, ಬಿ.ಆರ್.ಭಟ್, ಟ್ರಸ್ಟಿಗಳಾದ, ಶಕುಂತಲಾ ಕಿಣಿ, ರಮೇಶ ನಾಯಕ, ಡಾ. ಕಸ್ತೂರಿ ಮೋಹನ ಪೈ, ವಾಧಿಕಾ ಪೈ, ವಿಲಿಯಂ ಡಿಸೋಜಾ ಉಪಸ್ಥಿತರಿದ್ದರು.

ಸ್ಮಿತಾ ಶೆಣೈ ಕಾರ್ಯಕ್ರಮ ನಿರ್ವಹಿಸಿದರು. ಸುಚಿತ್ರಾ ಶೆಣೈ ಸಾಧಕರನ್ನು ಪರಿಚಯಿಸಿದರು. ಆಡಳಿತಾಧಿಕಾರಿ ದೇವಿದಾಸ ಪೈ ವಂದಿಸಿದರು.

Leave a Reply

Your email address will not be published. Required fields are marked *