ಉತ್ತರ ಕನ್ನಡ : ಚಕ್ರವರ್ತಿ ಸೂಲಿಬೆಲೆ ಬಿಜೆಪಿಯ ಆಯ್ಕೆ ಆದರೆ… | ಟಿ.ದೇವಿದಾಸ್

ಉತ್ತರ ಕನ್ನಡ ಲೋಕಸಭಾ ಸಂಸದ ಕ್ಷೇತ್ರಕ್ಕೆ ಬಿಜೆಪಿಯಿಂದ ಯುವ ಬ್ರಿಗೇಡ್ ಸ್ಥಾಪಕ ಮಿಥುನ ಚಕ್ರವರ್ತಿ ಸೂಲಿಬೆಲೆ ಸ್ಪರ್ಧಿಸುತ್ತಾರೆಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲೂ, ಮಾಧ್ಯಮಗಳಲ್ಲೂ ಪ್ರಚಾರವಾಗಿದೆ.

ಬಿಜೆಪಿಯ ಹೈಕಮಾಂಡ್ ಚಕ್ರವರ್ತಿ ಸೂಲಿಬೆಲೆಯವರಲ್ಲಿ ಈ ಕುರಿತಾಗಿ ಮಾತಾಡಿದ್ದಾರೆ ಎಂಬ ವದಂತಿಯೂ ಕೇಳಿ ಬಂದಿದೆ. ಎಷ್ಟರಮಟ್ಟಿಗೆ ಇದು ಸತ್ಯವೋ ಅಸತ್ಯವೋ ಗೊತ್ತಿಲ್ಲ. ಆದರೆ, ಬಿಜೆಪಿ ಇಂಥದ್ದೊಂದು ನಿರ್ಧಾರವನ್ನು ಮಾಡಿದ್ದೇ ಆದರೆ ಅದು ಸರಿಯಾದ ಆಯ್ಕೆಯಷ್ಟೇ ಅಲ್ಲ, ಸಮರ್ಥವಾದ ಆಯ್ಕೆ ಎಂಬುದರಲ್ಲಿ ಎರಡು ಮಾತಿಲ್ಲ. 

ಕಾರಣವಿಷ್ಟೆ: ಚಕ್ರವರ್ತಿ ಸೂಲಿಬೆಲೆಯವರ ಬದುಕು ಮತ್ತು ಬರೆಹ ಅನ್ಯಾನ್ಯ ಬಗೆಯಲ್ಲಿ ಅನನ್ಯವಾದುದು. ಅವರ ಪ್ರಸಿದ್ಧಿಯ ಹಿಂದೆ ಜಾತಿಯ ಬಲವಿಲ್ಲ. ಅಥವಾ ಇನ್ಯಾವುದೋ ರಾಜಕೀಯವಾದ ಬಲದಲ್ಲಿ ಚಕ್ರವರ್ತಿ ಸೂಲಿಬೆಲೆಯವರು ಪ್ರಸಿದ್ಧಿಗೆ ಬಂದವರೂ ಅಲ್ಲ. ಅಥವಾ ಮುಖ್ಯವಾಹಿನಿಯಲ್ಲಿ ಜನಪ್ರಿಯತೆಯನ್ನು ಗಳಿಸಲು ರಾಜಕೀಯವಾದ ಹಿನ್ನೆಲೆಯೂ ಇಲ್ಲ, ಮತ್ತು ರಾಜಕೀಯಕ್ಕೆ ಅಂತಲೂ ಸಮಾಜಸೇವೆಗೆ ಬಂದವರಲ್ಲ. ರಾಜಕೀಯ ಮಾಡಿಕೊಂಡು ಬದುಕುತ್ತಿರುವವರೂ ಅಲ್ಲ. ಇವು ಯಾವುದೂ ಖಂಡಿತವಾಗಿಯೂ ಅಲ್ಲವೇ ಅಲ್ಲ. ಇವತ್ತು ಚಕ್ರವರ್ತಿಯವರು ಏನಿದ್ದಾರೆಯೋ ಅದೆಲ್ಲ ಅವರು ಸ್ವಯಾರ್ಜಿತವಾದ ತಾಕತ್ತಿಂದ ಗಳಿಸಿದ ಸ್ವತ್ತು, ತಾಕತ್ತು ಮತ್ತು ಬಹುದೊಡ್ಡ ಹೆಗ್ಗಳಿಕೆ. ಇಷ್ಟು ಸಾಕಲ್ಲವೆ ಒಬ್ಬ ಸಮರ್ಥ ಜನಪ್ರನಿಧಿಯ ಸ್ಥಾನದ ಆಯ್ಕೆಗೆ?

ಬಿ.ಇ. ಪದವೀಧರರಾಗಿ ದೊಡ್ಡ ಮೊತ್ತದ ಸಂಬಳ ಕೊಡುವ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತ ಐಹಿಕದ ಬದುಕಿನೊಂದಿಗೆ ತನ್ನದೇ ಆದ ಪ್ರಪಂಚದಲ್ಲಿ ಸುಖದ ಜೀವನವನ್ನು ಸೂಲಿಬೆಲೆಯವರು ಹೊಂದಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಸೂಲಿಬೆಲೆಯವರ ಬದುಕು ಒಂದು ಮಾದರಿಯಾಗಿ, ಮೇಲ್ಪಂಕ್ತಿಯಾಗಿ ಕಾಣುವುದು ಅವರು ಕಟ್ಟಿಕೊಂಡ ಮತ್ತು ಅಳವಡಿಸಿಕೊಂಡ ಧ್ಯೇಯ ಮತ್ತು ಧೋರಣೆಗಳಿಂದಾಗಿ. ಲೌಕಿಕದ ಬದುಕೇ ಆಗಲಿ ಅಥವಾ ಅಲೌಕಿಕದ ಬದುಕೇ ಆಗಲಿ, ಯಾರಿಗೇ ಆಗಲಿ, ಬದುಕಿಗೊಂದು ಬದ್ಧತೆ ಇರಬೇಕು. ಆ ಬದ್ಧತೆಗೊಂದು ಸರಿಯೂ, ಸಹಜವೂ, ಸೂಕ್ತವೂ ಆದ ಮಾರ್ಗವಿರಬೇಕು. ಅಥವಾ ಮಾರ್ಗದರ್ಶನವೂ ಇರಬೇಕು. ಹಾಗೆ ರೂಢಿಸಿಕೊಂಡ ಮಾರ್ಗವು ಸಮೂಹವು ಸ್ವೀಕರಿಸಬಹುದಾದ ಸಹನೀಯ ಮೌಲ್ಯಗಳನ್ನು ಹೊಂದಿರಬೇಕು. ನಿಶ್ಚಿತವಾಗಿ ಹೇಳುತ್ತೇನೆ; ಸದ್ಯದ ಮಟ್ಟಿಗೆ ಈ ಮೂರೂ ಸೂಲಿಬೆಲೆಯವರ ಬದುಕಲ್ಲಿ ಸಮಪಾಕದ ಮಿಶ್ರಣವಾಗಿ ಹಾಸುಹೊಕ್ಕಿದೆ. ತಾನು ಬದುಕಬೇಕು ಎಂಬಲ್ಲಿ ಅದು ಸಮಾಜಮುಖೀಯಾಗಿರಬೇಕು ಎಂಬ ಎಚ್ಚರ ಅಷ್ಟು ಸುಲಭವಾಗಿ ಯಾರಲ್ಲೂ ಹುಟ್ಟಿಕೊಳ್ಳುವುದಿಲ್ಲ. ವಿಷಯ ಸುಖಕ್ಕಾಗಿ ಕೇವಲ ಬದುಕಬೇಕು ಎಂಬ ಕಾರಣಕ್ಕಾಗಿ, ಸುಮ್ಮನೆ ಎಲ್ಲ ಬಂಧನವನ್ನೂ ಕಳಚಿಕೊಂಡು ಬದುಕುವಂತೆ ಬದುಕಿ ಬಿಡುವ ಹುಕಿಗೆ ಈ ಬದುಕನ್ನು ಅವಸರದಲ್ಲಿ ದೂಡಿಕೊಳ್ಳುವಷ್ಟು ಈ ಬದುಕು ಸದರವೂ ಅಲ್ಲ, ಯಃಕಶ್ಚಿತ್ತವೂ ಅಲ್ಲ ಎಂಬ ಅರಿವು ಸೂಲಿಬೆಲೆಯಂಥವರ ಸಮಾಜಮುಖೀ ಬದುಕಿನಿಂದ ಮಾತ್ರ ಹುಟ್ಟಬಲ್ಲುದು. ದಾಸರು ಅಂತಾರಲ್ಲ, ಈಸಬೇಕು ಇದ್ದು ಜಯಿಸಬೇಕು ಎಂದು…ಹಾಗೆ! ಸೂಲಿಬೆಲೆಯವರು ಈಸಿದರು, ಈಸಿ ಜಯಿಸಿದರು. ಜಯಿಸುತ್ತಿದ್ದಾರೆ ಕೂಡ!

ತನ್ನ ಚಿಂತನೆಗಳ ಮೂಲಕ, ಯುವ ಬ್ರಿಗೇಡ್ ಮೂಲಕ, ರಾಷ್ಟ್ರೀಯತೆಯ ನಿಜ ಬದ್ಧತೆಯನ್ನು ಅಭಿವ್ಯಕ್ತಿಸುವ‌ ಮೂಲಕ, ಸಮಾಜಸೇವೆಗಳ ಮೂಲಕ, ಮುಚ್ಚಿಟ್ಟ ಇತಿಹಾಸದ ಸತ್ಯಗಳನ್ನು ತೆರೆದಿಡುವ ಮೂಲಕ, ರಾಷ್ಟ್ರಕ್ಷೇಮ, ರಾಷ್ಟ್ರಪ್ರೇಮದ ಬಗ್ಗೆ ಜನಜಾಗೃತಿಯನ್ನು ತನ್ನ  ಚಿಂತನೆಗಳ ಮೂಲಕ ರಾಜ್ಯದುದ್ದಕ್ಕೂ ಮಾಡುತ್ತ ಬೆಳೆದವರು ಚಕ್ರವರ್ತಿ ಸೂಲಿಬೆಲೆಯವರು. ಹಾಗಂತ ಸಂಘರ್ಷಗಳೇ ಅವರ ಬದುಕಲ್ಲಿ ಇಲ್ಲ ಅಂತಲ್ಲ. ಸಾಮಾಜಿಕವಾದ ಬದುಕಲ್ಲಿ ಸಂಘರ್ಷಗಳು ವಿವಾದಗಳು ಇಲ್ಲದೇ ಇರಲು ಸಾಧ್ಯವಿಲ್ಲ. ಸಾಧ್ಯವಿದೆ ಎಂದಾದರೆ ಅದು ಮುಖವಾಡದ ಸೇವೆ ಅಂತಲೇ ಅರ್ಥ. ಚಕ್ರವರ್ತಿ ಅಂಥವರಲ್ಲ. ಆದ್ದರಿಂದ ಕೆಲವು ಸಲ ವಿರೋಧಗಳನ್ನು ವಿವಾದಗಳನ್ನು ಅವರು ಎದುರಿಸುವ ಪರಿಸ್ಥಿತಿ ವಿನಾಕಾರಣ ಹುಟ್ಟಿಕೊಂಡು ಬಿಡುತ್ತದೆ.

ಸಮುದಾಯದ ಪ್ರಜ್ಞೆಯನ್ನು ರಾಷ್ಟ್ರೀಯತೆಯ ಪ್ರಜ್ಞೆಯನ್ನಾಗಿ ಬೆಳೆಸುತ್ತಲೇ ಸಮುದಾಯ ಪ್ರಜ್ಞೆಯ ಸಾಂಕೇತಿಕ ಪ್ರತಿನಿಧಿಯಾಗಿ ಬೆಳೆದು ನಿಂತವರು ಚಕ್ರವರ್ತಿಯವರು. ಹಾಗೆಯೇ ತನ್ನನ್ನು ಬೆಳೆಸಿದ ಸಮುದಾಯದ ಪ್ರಜ್ಞೆಯನ್ನು ಚೆನ್ನಾಗಿಯೇ ಬಲ್ಲವರು ಚಕ್ರವರ್ತಿಯವರು. ಆದ್ದರಿಂದ ಸಮುದಾಯದ ಅಸ್ತಿತ್ವ ಮತ್ತು ಅದಕ್ಕೆ ಅನಿವಾರ್ಯವಾದ ಅಗತ್ಯಗಳನ್ನು ತಳಮಟ್ಟದಲ್ಲೇ ಬಲ್ಲ ಚಹರೆಯನ್ನು ವ್ಯಕ್ತಿತ್ವವನ್ನಾಗಿ ಉಳ್ಳ ಚಕ್ರವರ್ತಿಯವರಿಗೆ ರಾಜಕೀಯವಾಗಿ ಸಿಗುವ ಅಧಿಕಾರದಿಂದ ಸಮುದಾಯದ ಅಗತ್ಯಗಳನ್ನು ನೀಗಿಸುವ ಹಂಬಲ ಸಾಕಷ್ಟು ಇದ್ದೇ ಇದೆ. ತಮ್ಮ ಸಂಘಟನೆಯ ಮೂಲಕ ಅನೇಕ ಬಗೆಯಲ್ಲಿ ಸಾಮಾಜಿಕ ಸೇವೆಗೆ ತೊಡಗಿಕೊಂಡ ಚಕ್ರವರ್ತಿ ಸೂಲಿಬೆಲೆಯವರಿಗೆ ರಾಜಕೀಯವಾಗಿ ಸಿಗುವ ಅಧಿಕಾರದಿಂದ ಸರ್ಕಾರದ ಮಟ್ಟದಲ್ಲಿ ಆಗಬಹುದಾದ ಕೆಲಸಗಳನ್ನು ತಾನು ಪ್ರತಿನಿಧಿಸುವ ಕ್ಷೇತ್ರದ ಸಮುದಾಯದ ಪ್ರಜ್ಞೆಯೊಂದಿಗೆ ಮಾಡಲು ಸಾಕಷ್ಟು ಅವಕಾಶಗಳು ಒದಗುತ್ತವೆ. ತಳಮಟ್ಟದಿಂದ. ಇದು ಜನಪ್ರತಿನಿಧಿಯಾಗಲು ಇರಬೇಕಾದ ನಿಜವಾದ ಕನಸು ಮತ್ತು ಹಂಬಲ.೨೦೧೪ರಲ್ಲಿ ಮೋದಿಯನ್ನು ಬೆಂಬಲಿಸಿ ನಮೋ ಬ್ರಿಗೇಡ್ ಮೂಲಕ ರಾಜ್ಯವ್ಯಾಪಿ ಹೊಸ ಬಗೆಯಲ್ಲಿ ಚುನಾವಣಾ ಪ್ರಚಾರ ಕಾರ್ಯವನ್ನು ಕೈಗೊಂಡ ಸೂಲಿಬೆಲೆಯವರಿಗೆ ರಾಜ್ಯವ್ಯಾಪಿ ದೊರಕಿದ ದೊಡ್ಡಮಟ್ಟದ ಜನಸ್ಪಂದನೆ ೨೦೧೯ರ ಗೆಲುವಿಗೂ ಟೀಂ ಮೋದಿಯಾಗಿ ಪ್ರಚಾರ ಮಾಡುವಂತೆ ಪ್ರೇರಣೆಯಾಯಿತು. ಈ ಬಾರಿಯ ಚುನಾವಣೆಗೆ ಮತ್ತದೇ ಗೆಲುವನ್ನು ಪಡೆಯುವಂತಾಗಲು ಸ್ಫೂರ್ತಿಯನ್ನು ಈ ಎರಡು ಕಾರ್ಯಸಾಧನೆಗಳು ನೀಡಿವೆ. ಮೋದಿ ನಂತರ ಚಕ್ರವರ್ತಿ ಸೂಲಿಬೆಲೆಯವರೇ ಸ್ಟಾರ್ ಪ್ರಚಾರಕರು ಅಂತ ಇದೇ ಪತ್ರಿಕೆಯಲ್ಲಿ ಜಯವೀರ ವಿಕ್ರಮ ಸಂಪತ್ ಗೌಡ ಬರೆದಿದ್ದರು. ಮತ್ತಷ್ಟು ಹುರುಪು, ಹುಮ್ಮಸ್ಸು, ಪ್ರೇರಣೆಯೊಂದಿಗೆ ಮೋದಿ ಸಾಧನೆಗಳನ್ನು ಜನರಿಗೆ ತಿಳಿಸುವ ಕಾಯಕದಲ್ಲಿ ಈಗಾಗಲೇ ತಮ್ಮ ಯುವ ಬ್ರಿಗೇಡ್ ಮೂಲಕ ಚಕ್ರವರ್ತಿಯವರು ಆರಂಭ ಮಾಡಿದ್ದಾರೆ. ರಾಜಕೀಯಕ್ಕೆ ಸಂಬಂಧಿಸಿದ ಒಬ್ಬ ವ್ಯಕ್ತಿಯ ಮಾತುಗಳನ್ನು ಕೇಳಲು ಜನರು ಬರುವುದಕ್ಕೆ ಯಾವ ಅರ್ಥವಿರುತ್ತದೆ ಎಂಬುದನ್ನು ವಿವರಿಸುವ ಅಗತ್ಯವಿಲ್ಲ. ಸರಿಹೊತ್ತಿನ ರಾಜಕೀಯಕ್ಕೆ ಸಂಬಂಧಪಡದ, ಯಾವ ಪಕ್ಷಕ್ಕೂ ವಕ್ತಾರನಲ್ಲದ, ಯಾವ ಅಂತಸ್ತು, ಸ್ಥಾನಮಾನ, ಅಧಿಕಾರ, ದುಡ್ಡು ಇಲ್ಲದ ಒಬ್ಬ ವ್ಯಕ್ತಿಯ ಮಾತುಗಳನ್ನು, ಕೇವಲ ಮಾತುಗಳನ್ನು ಮಾತ್ರ ಕೇಳಲು ಜನರು ದಂಡು ದಂಡಾಗಿ ಬರುತ್ತಾರೆಂದರೆ ಯಾವ ರೀತಿ ವ್ಯಾಖ್ಯಾನಿಸಬಹುದು ಹೇಳಿ? ಇದು ಸೂಲಿಬೆಲೆಯವರ ನಿಜವಾದ ತಾಕತ್ತು, ಇವರನ್ನು ಸಂಸದ ಸ್ಥಾನಕ್ಕೆ ಸ್ಪರ್ಧಿಸಲು ಬಿಜೆಪಿ ಆಯ್ಕೆ ಮಾಡಿದರೆ ಜಿಲ್ಲೆಗೆ ಹಿತವಿದೆ.

ಗಳಿಸಿದ ಜನಪ್ರೀತಿಯೆಂಬ ಸಂಪತ್ತಿಗೆ ಸಲ್ಲಬೇಕಾದ ಅತೀ ದೊಡ್ಡ ಗೌರವವೆಂದು ತಿಳಿಯಬೇಕಾಗುತ್ತದೆ. ಅವರಲ್ಲಿರುವ ಕ್ರಿಯಾಶೀಲತೆ, ಸೃಷ್ಟಿಶೀಲತೆ, ಪ್ರತಿಭೆ ಮತ್ತು ಜ್ಞಾನವು ಈ ತೆರನಾಗಿ ಸಮಾಜಕ್ಕೆ ಸಿಗುವಂತಾದುದು ನಾಡಿನ ಸೌಭಾಗ್ಯ. ನಿಸ್ಪೃಹತೆ, ನಿರಹಂಕಾರ, ಸ್ವಾಭಿಮಾನ, ಅಪಾರ ರಾಷ್ಟ್ರಪ್ರೇಮ-ರಾಷ್ಟ್ರಕ್ಷೇಮ-ರಾಷ್ಟ್ರಹಿತದ ಚಿಂತನೆಯನ್ನು ಮಾತ್ರ ಉಳ್ಳ ವ್ಯಕ್ತಿತ್ವಕ್ಕೆ ಜನತೆಯ ಉತ್ಕಟವಾದ ಪ್ರಾಂಜಲ ಮನಸ್ಸಿನ ಗೌರವಾದರಕ್ಕೆ ಯಾವುದು ಸಾಟಿಯಾಗಬಲ್ಲುದು! ಸೂಲಿಬೆಲೆಯವರು ಇದಕ್ಕೆ ಸಹಜವಾಗಿಯೇ ಬಾಧ್ಯಸ್ಥರು. ಈ ಹಿಂದಿನ ಎರಡು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ತಾವು ಗೆಲ್ಲಲು ಎಷ್ಟು ಶ್ರಮವನ್ನು ಪಟ್ಟಿದ್ದಾರೋ ಗೊತ್ತಿಲ್ಲ, ತಮ್ಮ ಕ್ಷೇತ್ರದ ಎಷ್ಟು ಪ್ರದೇಶಗಳಿಗೆ ಹೋಗಿ ಯಾವ ಕಾರಣಕ್ಕಾಗಿ ತನಗೆ ಓಟು ಕೊಡಿ ಎಂದು ಕೇಳಿದ್ದಾರೋ ಗೊತ್ತಿಲ್ಲ, ಆದರೆ, ಕರ್ನಾಟಕದಲ್ಲಿ ಮೋದಿ ಪರ ಪ್ರಚಾರವನ್ನು ಸತತವಾಗಿ ಮಾಡಿದವರು ಸೂಲಿಬೆಲೆಯವರು. ಕರ್ನಾಟಕದ ೨೫ ಕ್ಷೇತ್ರಗಳ ಬಿಜೆಪಿಯ ಗೆಲುವಿನ ಹಿಂದೆ ಸೂಲಿಬೆಲೆಯವರ ಪಾಲೂ ಇದೆಯೆಂಬುದು ನಿಸ್ಸಂದೇಹ. ಯುವ ಬ್ರಿಗೇಡಿನ ಶ್ರಮವೂ ಇದೆ.

ಯಾವುದೇ ಸ್ವಾರ್ಥವಿಲ್ಲದ, ನದಿಯ ದಡ, ಕಲ್ಯಾಣಿ, ಊರುಕೇರಿಗಳ ಶುದ್ಧಿಯನ್ನು, ದೀನರಿಗೆ ಸಹಾಯವನ್ನು, ಕೊರೊನಾ ಸಂದರ್ಭದಲ್ಲಿ ಅವಿರತ ಸೇವೆಯನ್ನು, ಹಲವು ಬಗೆಯಲ್ಲಿ ಸಾಮಾಜಿಕ ಕಾರ್ಯಗಳನ್ನು ಯುವ ಬ್ರಿಗೇಡ್ ಮೂಲಕ ಮಾಡುತ್ತ ಬಂದಿರುವ, ಸೃಜನಶೀಲ ವ್ಯಕ್ತಿತ್ವದ, ಯಾವ ಲಾಭವೂ ಇಲ್ಲದೆ ೧೦ ವರ್ಷಗಳಿಂದ ಮೋದಿಯ ಪರ ಪ್ರಚಾರ ಮಾಡಿದ ವ್ಯಕ್ತಿಯೊಬ್ಬನಿಗೆ ಬಿಜೆಪಿ ಸಂಸದ ಸ್ಥಾನಕ್ಕೆ ಟಿಕೆಟ್ಟು ಕೊಡುವುದು ಪಕ್ಷಾತೀತವಾಗಿ ಯಾರೂ ಮೆಚ್ಚುವಂಥದ್ದು. ಅಂಥ ಇನ್ ಸೈಟ್ ಇರುವ ಚಕ್ರವರ್ತಿಯವರಿಗೆ ಹುಟ್ಟು ಜಿಲ್ಲೆಯಲ್ಲೇ ಸ್ಪರ್ಧಿಸುವ ಅವಕಾಶ ಸಿಗಬೇಕೆಂಬ ಹಂಬಲ ಜಿಲ್ಲೆಯಲ್ಲಿದೆ.

| ಟಿ.ದೇವಿದಾಸ್

Leave a Reply

Your email address will not be published. Required fields are marked *