ಬಡ ಅರ್ಹ ಯುವಕರಿಗೆ ಅನ್ಯಾಯ
ಕುಮಟಾ: ಸರಕಾರದ ನಿಯಮದಡಿ ವಿವಿಧ ಹಂತದ ಉದ್ಯೋಗ ನೇಮಕಾತಿಯಾಗುವಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ವಿಷಯ ನಿತ್ಯ ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇರುತ್ತದೆ.
ಇಂಜಿನಿಯರ್, ಪಿ.ಎಸ್.ಐ, ಪೊಲೀಸ್, ಆರ್ಎ.ಫ.ಓ., ಪಿ.ಡಿ.ಓ., ಎಫ್.ಡಿ.ಎ., ಎಸ್.ಡಿ.ಎ. ಹೀಗೆ ನಾನಾ ನೇಮಕಾತಿಯ ಸಂದರ್ಭದಲ್ಲಿ ಕಾನೂನು ಎಷ್ಟೇ ಬಿಗಿಯಾಗಿದ್ದರೂ ಹಣದ ಥೈಲಿ ತನ್ನ ಪ್ರಭಾವ ತೋರಿಸುವುದು ಸಾಮಾನ್ಯ ಅನ್ನುವಷ್ಟರ ಮಟ್ಟಿಗೆ ನಡೆದು ಹೋಗುತ್ತಿದೆ.
ಇದೀಗ ತಾಲೂಕಿನ ಕಲಭಾಗ ಗ್ರಾಮ ಚಾವಡಿಯಲ್ಲಿ ಖಾಲಿ ಇದ್ದ ಉಗ್ರಾಣಿ (ಗ್ರಾಮ ಸಹಾಯಕ) ಸ್ಥಾನಕ್ಕಾಗಿ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯುವಾಗ ಕುಮಟಾ ತಹಸೀಲ್ದಾರ್ ಕಚೇರಿಯಲ್ಲಿ ಹಾಡು ಹಗಲೇ ‘ಕುರುಡು ಕಾಂಚಾಣ ಕುಣಿಯುತಲಿತ್ತು…’ ಎಂದು ಸಾರ್ವಜನಿಕ ವಲಯದಲ್ಲಿ ಗುಸುಗುಸು ಸುರುವಾಗಿದೆ. ಉಗ್ರಾಣಿ ನೇಮಕದಲ್ಲಿ ಘಮಟು ಒಗ್ರಾಣಿ ಕೊಟ್ಟವರ್ಯಾರು ಎಂಬ ಚರ್ಚೆ ಸದ್ಯದ ‘ಟಾಕ್ ಆಫ್ ದಿ ಕುಮಟಾ’.

ಹಿನ್ನೆಲೆ : ಕುಮಟಾ ತಾಲೂಕಿನ ಕಲಭಾಗ ಫಿರ್ಕಾದ ಗ್ರಾಮ ಚಾವಡಿಯಲ್ಲಿ 2023 ಫೆಬ್ರುವರಿ 3 ರಿಂದ ತೆರವಾದ ಗ್ರಾಮ ಸಹಾಯಕ ಹುದ್ದೆಗೆ ಒಂದು ವರ್ಷದ ನಂತರ ಕುಮಟಾ
ತಹಸೀಲ್ದಾರ ಕಚೇರಿಯಿಂದ ‘ನೇರ ನೇಮಕಾತಿ’ ಪ್ರಕ್ರಿಯೆ ಆರಂಭಿಸಿ ಅರ್ಜಿಯನ್ನೂ ಕರೆಯಲಾಗುತ್ತದೆ. ಅದರ ಪ್ರಕಾರ 37 ಅಭ್ಯರ್ಥಿಗಳು ಪ್ರಸ್ತುತ ಗ್ರಾಮ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಿರುತ್ತಾರೆ. ಹೀಗೆ ಅರ್ಜಿ ಸಲ್ಲಿಸಿದವರಲ್ಲಿ ಎಂ.ಎಸ್.ಸಿ.,ಬಿ.ಎಸ್.ಸಿ., ಬಿ.ಕಾಂ. ಹಾಗೂ ಇನ್ನಿತರ ಅರ್ಹತೆ ಇದ್ದವರೂ, ಎಫ್.ಡಿ.ಎ., ಪಿ.ಡಿ.ಓ ಪರೀಕ್ಷೆಗೆ ಸಜ್ಜಾಗುತ್ತಿರುವ ಯುವಕರೂ ಸೇರಿದ್ದಾರೆ!

ಅಂತೂ ಕುಮಟಾ ತಹಸೀಲ್ದಾರರು ನೇಮಕಾತಿಗಾಗಿ ಮೌಖಿಕ ಸಂದರ್ಶನವನ್ನು ಕುಮಟಾದ ಮೂರೂರು ರಸ್ತೆಯಲ್ಲಿನ ನೂತನ ತಹಸೀಲ್ದಾರ ಕಚೇರಿಯಲ್ಲಿ 2024 ಮಾರ್ಚ್ 11 ರಂದು ಮುಂಜಾನೆ 10-30ಕ್ಕೆ ನಿಗದಿ ಪಡಿಸುತ್ತಾರೆ. ಕರ್ನಾಟಕ ರಾಜ್ಯದ ಗ್ರಾಮ ಸಹಾಯಕ ನೇಮಕಾತಿ ನಿಯಮಾವಳಿಗೆ ಸಂಬಂಧಿಸಿದಂತೆ ಮೌಖಿಕ
ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ನೇರ ನೇಮಕ ಮಾಡಿಕೊಳ್ಳಬೇಕಾಗಿರುತ್ತದೆ. ಆದರೆ ಕುಮಟಾ ತಹಸೀಲ್ದಾರರು ದಿಢೀರನೇ ತಮ್ಮದೇ ಆದ ಹೊಸ ನಿಯಮಾವಳಿಯ ಫರ್ಮಾನು ಹೊರಡಿಸಿ ಅಭ್ಯರ್ಥಿಗಳಿಗೆ ಮೌಖಿಕ ಸಂದರ್ಶನದ ಬದಲು ಆಗಿಂದ್ದಾಗೇ ಅಭ್ಯರ್ಥಿಗಳ ಗಮನಕ್ಕೆ ತಂದು ಲಿಖಿತ ಪರೀಕ್ಷೆಯನ್ನು ಹಮ್ಮಿಕೊಳ್ಳುತ್ತಾರೆ. ಈ ಪ್ರಕಾರ 2024 ಮಾರ್ಚ್ 11ರಂದು ಮುಂಜಾನೆ 10-30ಕ್ಕೆ ಗ್ರಾಮ ಸಹಾಯಕ ನೇಮಕಾತಿ ಪರೀಕ್ಷೆಗೆ ಎಲ್ಲ 37 ಅರ್ಜಿದಾರ ಅಭ್ಯರ್ಥಿಗಳಲ್ಲಿ ಪಾಲ್ಗೊಂಡವರ ಪೈಕಿ ಕೆಲವರನ್ನು ಗ್ರಾಮ ಸಹಾಯಕ ನೇಮಕಾತಿಯ ನಿಯಮಾವಳಿಯ ಪ್ರಕಾರ ಕೆಲ ಅಭ್ಯರ್ಥಿಗಳನ್ನು 25 ವರ್ಷ ಪೂರ್ತಿ ಆಗಿಲ್ಲವೆಂತಲೂ, ಮತ್ತೆ
ಕೆಲವರನ್ನು ಕಲಭಾಗ ಗ್ರಾಮದ ಹೊರತಾಗಿ ಇತರ ಗ್ರಾಮದಿಂದ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳೆಂತಲೂ
ಆಯ್ಕೆ ಪ್ರಕ್ರಿಯಿಯಿಂದ ಹೊರಗಿಟ್ಟರು. ಇದರಿಂದಾಗಿ ಕಲಭಾಗ ಗ್ರಾಮದ 9 ಜನ ಅಭ್ಯರ್ಥಿಗಳು ಮಾತ್ರ ಉತ್ತರ ಪತ್ರಿಕೆ ಬರೆಯುತ್ತಾರೆ.
ಈ ಪರೀಕ್ಷೆಗೆ ಪ್ರಶ್ನೆ ಪತ್ರಿಕೆಯನ್ನು ಸಿದ್ಧ ಪಡಿಸಿದವರ್ಯಾರು, ಆರಂಭದಲ್ಲಿ ನೇರ ನೇಮಕಾತಿಯ ಪ್ರಕಟಣೆ ಹೊರಡಿಸಿ ಅನಂತರ ಸಂದರ್ಶನದ ದಿನ ಈ ರೀತಿ ಏಕಾಏಕಿ ಲಿಖಿತ ಪರೀಕ್ಷೆಯ ಮೂಲಕ ಗ್ರಾಮ ಸಹಾಯಕ ಹುದ್ದೆ ಆಯ್ಕೆ ಮಾಡಲು ಕುಮಟಾ ತಹಸೀಲದ್ದಾರರಿಗೆ ಯಾರು ಅಧಿಕಾರ ಕೊಟ್ಟರು ಎಂಬುದು ಇನ್ನೂ ನಿಗೂಢ!
ಮತ್ತಷ್ಟು ಸೋಜಿಗದ ಸಂಗತಿ ಏನೆಂದರೆ ಈ ಉಗ್ರಾಣಿ ಪರೀಕ್ಷೆ ಯು.ಪಿ.ಎಸ್.ಸಿ. ಮೂಲಕ ಐಎಎಸ್ ಪರೀಕ್ಷೆ ನಡೆಸುವಂತೆ ವಿಡಿಯೋ ಕ್ಯಾಮರಾ ಅಳವಡಿಸಿ ನಡೆಸಿರುತ್ತಾರೆ. ಪಕ್ಕಾ ‘ಪಾರದರ್ಶಕ’ ಪರೀಕ್ಷೆ. ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಿದ್ದರಲ್ಲಿ ಯಾರ ತಕರಾರೂ ಇಲ್ಲ.
ಪರೀಕ್ಷೆ ನಡೆದ ದಿನ ಮಾರ್ಚ್ 11 ರಂದು ಮಧ್ಯಾಹ್ನವೇ ಕಲಭಾಗ ಫಿರ್ಕಾದ ಗ್ರಾಮ ಸಹಾಯಕ ಹುದ್ದೆಗೆ ಆಯ್ಕೆ ಆದ ಅಭ್ಯರ್ಥಿಯ ಹೆಸರನ್ನು ತಹಸೀಲ್ದಾರರು ಘೋಷಿಸುತ್ತಾರೆ. ಈ ಫಲಿತಾಂಶದ ಪ್ರಕಾರ ಎಸ್.ಎಸ್.ಎಲ್.ಸಿ.ಯಲ್ಲಿ ಶೇ40. ಪಡೆದ (ಮಾಹಿತಿ ಹಕ್ಕು ಅಧಿನಿಯಮದಡಿ ನೀಡಿದ ಮಾಹಿತಿ ಅನ್ವಯ) ಯುವಕ ಕಲಭಾಗದ ಫೀರ್ಕಾದ ಅಳ್ವೇಕೋಡಿಯ ಹರೀಶ ಡೊಂಗರ್ಸಿ ಗ್ರಾಮ ಸಹಾಯಕನಾಗಿ ಆಯ್ಕೆ ಆಗುತ್ತಾನೆ. ಇದು ಅವನ ಪ್ರತಿಭೆ ಅಥವಾ ಅರ್ಹತೆ. ಆತ ನೇಮಕಾತಿ ನಿಯಮಾವಳಿಯಂತೆ ಆದಲ್ಲಿ ಯಾರ ಆಪೇಕ್ಷಣೆ ಇರುವುದಿಲ್ಲ. ಆಕ್ಷೇಪಣೆ ಇರುವುದು
ನೇಮಕಾತಿಗಾಗಿ ಅನಿರೀಕ್ಷಿತವಾಗಿ ಪರೀಕ್ಷೆ ಯಾಕೆ ಮಾಡಿದರು. ಅರ್ಜಿ ಸಲ್ಲಿಸಿದ ಮಿಕ್ಕ ಅಭ್ಯರ್ಥಿಗಳಿಗಿಂತ ಈ ಅಭ್ಯರ್ಥಿಗೆ ಅರ್ಹತೆ ಇದ್ದರೆ ಆತ ಆಯ್ಕೆ ಆಗಲಿ ; ಆದರೆ ಇಲ್ಲಿ ಜನರ ಪ್ರಶ್ನೆ ಏನೆಂದರೆ, ಗ್ರಾಮ ಸಹಾಯಕನಾಗಿ ಆಯ್ಕೆ ಆದ ಅಭ್ಯರ್ಥಿಗೆ ಮುನ್ನಾ ದಿನವೇ ಯಾಕೆ ಪ್ರಶ್ನೆ ಪತ್ರಿಕೆ ತಲುಪಿಸಿ ಮರುದಿನ ಶೋಕಿಗಾಗಿ ಪಾರದರ್ಶಕತೆಯ ನೆಪ ಮಾಡಿ ವಿಡಿಯೋ ಕ್ಯಾಮರಾ ಅಡಿಯಲ್ಲಿ ಉತ್ತರ ಪತ್ರಿಕೆ ಬರೆಸಿರಬಾರದು? ಈ ಕಾರಣಕ್ಕಾಗಿಯೇ ತಹಸೀಲ್ದಾರರು ಸರಕಾರಿ ನಿಯಮಾವಳಿ ಮೀರಿ ಲಿಖಿತ ಪರೀಕ್ಷೆ ಎಂಬ ಪ್ರಹಸನ ಮಾಡಿರಬಹುದೇ?.. ಇಂಥ ಪ್ರಶ್ನೆಗಳು ಇದೀಗ ಕಲಭಾಗ ಫಿರ್ಕಾ ಮಾತ್ರವಲ್ಲ, ಕುಮಟಾ ಪಟ್ಟಣದಲ್ಲೂ ಚಿಗುರಿಕೊಳ್ಳುತ್ತಿದೆ. ಹೀಗೆ ಜವಾಬ್ದಾರಿ ಸ್ಥಾನದಲ್ಲಿದ್ದ ತಹಸೀಲ್ದಾರರು ಗ್ರಾಮ ಸಹಾಯಕ ಹುದ್ದೆಯ ನೇಮಕಾತಿಯನ್ನು ಲಿಖಿತ ಪರೀಕ್ಷೆಯ ಮೂಲಕೆ ಯಾಕೆ ಮಾಡಿದರು ಎಂಬುದೇ ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿದೆ.
ಇದನ್ನೂ ಓದಲೇ ಬೇಕು : ಮಾರ್ಚ್ 11 ರಂದು ಮುಂಜಾನೆ 10-30ಕ್ಕೆ ನಡೆಯುವ ಲಿಖಿತ ಪರೀಕ್ಷೆಯಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಶೇ40. ದಲ್ಲಿ ಉತ್ತೀರ್ಣನಾದ ಯುವಕ ಕಲಭಾಗದ ಫೀರ್ಕಾದ ಅಳ್ವೇಕೋಡಿಯ ಹರೀಶ ಡೊಂಗರ್ಸಿ ಗ್ರಾಮ ಸಹಾಯಕನಾಗಿ ‘ಆಯ್ಕೆ’ ಆಗುವ ಸಾಧ್ಯತೆ ಇದೆ ಎಂದು ಕುಮಟಾದ ನ್ಯಾಯವಾದಿ ಎಸ್.ಜೆ.ನಾಯ್ಕ ಅಳ್ವೇಕೋಡಿ ಅನುಮಾನ ವ್ಯಕ್ತಪಡಿಸಿ, ಮಾರ್ಚ್ 5 ರಂದೇ ಕರ್ನಾಟಕ ಸರಕಾರದ ಕಂದಾಯ
ಸಚಿವರು, ಮುಖ್ಯ ಕಾರ್ಯದರ್ಶಿಗಳು, ಪ್ರಾದೇಶಿಕ ಆಯುಕ್ತರು ಬೆಳಗಾವಿ, ಉತ್ತರ ಕನ್ನಡ ಜಿಲ್ಲಾಧಿಕಾರಿಗಳು, ಸಹಾಯಕ ಕಮಿಷನರ್ ಕುಮಟಾ ಅವರಿಗೆ ಮನವಿ ಮಾಡಿ, ನೇಮಕಾತಿ ಪ್ರಕ್ರಿಯೆ ನ್ಯಾಯಯುತವಾಗಿ ನಡೆಸುವಂತೆ ಕುಮಟಾ ತಹಸೀಲ್ದಾರರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅವರು ಒತ್ತಾಯಸಿದ್ದರು. ಇಷ್ಟೇ ಅಲ್ಲ, ನ್ಯಾಯವಾದಿ ಎಸ್..ಜೆ.ನಾಯ್ಕ ಅವರು ಪ್ರಸ್ತುತ ಗ್ರಾಮ ಸಹಾಯಕ ಹುದ್ದೆಗೆ ಅರ್ಜೆ ಸಲ್ಲಿಸಿದ ಎಲ್ಲ 37 ಅಭ್ಯರ್ಥಿಗಳ ಅಂಕ ಪಟ್ಟಿಯನ್ನು ಮಾಹಿತಿ ಹಕ್ಕು ಅಧಿನಿಯಮದಡಿ ಪಡೆದು ಜಿಲ್ಲಾಧಿಕಾರಿಗಳಿಗೆ 2023 ಸೆಪ್ಟೆಂಬರ್ 25 ರಂದು ಪತ್ರ ಪರೆದು ಈ ನೇಮಕಾತಿಯಲ್ಲಿ ಅವ್ಯವಹಾರ ಆಗುವ ಸಾಧ್ಯತೆಯ ಬಗ್ಗೆ ತಿಳಿಸಿದ್ದರು. ಈ ಪತ್ರದ ಅನ್ವಯ
ಜಿಲ್ಲಾಧಿಕಾರಿಗಳು ಕುಮಟಾ ಸಹಾಯಕ ಆಯುಕ್ತರಿಗೆ 2023 ಅಕ್ಟೋಬರ್ 10 ರಂದು ಪತ್ರ ಬರೆದು ನ್ಯಾಯವಾದಿ ಎಸ್.ಜೆ.ನಾಯ್ಕ ಅವರ ಪತ್ರಕ್ಕೆ ಸೂಕ್ತ ಕ್ರಮ ಕೈಗೊಂಡು ತಮಗೂ, ಅರ್ಜಿದಾರರಿಗೂ ಲಿಖಿತವಾಗಿ ತಿಳಿಸುವಂತೆ ಆದೇಶಿಸಿದ್ದರು. ಆದರೆ ಸಹಾಯಕ ಆಯುಕ್ತರು ಅರ್ಜಿದಾರರಿಗೆ ಈ ತನಕವೂ ಯಾವುದೇ ಉತ್ತರ ನೀಡದಿರುವುದು ಹಾಗೂ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಬಂದ ಪತ್ರಕ್ಕೂ ಸ್ಪಂದಿಸದಿರುವುದನ್ನು ಗಮನಿಸಿದರೆ ನೇಮಕಾತಿಯ ‘ಪಾರದರ್ಶಕತೆ’ ಬಗ್ಗೆ ಇನ್ನಷ್ಟು ಅನುಮಾನದ ಹೊಗೆ ಏಳುತ್ತದೆ.

ಮುಂದೆ ನಡೆದದ್ದೇನು ? : ನಿರೀಕ್ಷೆಯಂತೆ ನ್ಯಾಯವಾದಿ ಎಸ್.ಜೆ.ನಾಯ್ಕ ಅಳ್ವೇಕೋಡಿ ಅನುಮಾನ ಪಟ್ಟಂತೆ ಮಾರ್ಚ್ 11 ರ ಗ್ರಾಮ ಸಹಾಯಕ ನೇಮಕಾತಿಗಾಗಿ ನಿಯಮಾವಳಿ ಮೀರಿ ನಡೆಸಿದ ಲಿಖಿತ ಪರೀಕ್ಷೆಯಲ್ಲಿ ಅರ್ಹತೆಯುಳ್ಳ ಮಿಕ್ಕ ಅಭ್ಯರ್ಥಿಗಳನ್ನು ಮೀರಿ ನ್ಯಾಯವಾದಿ ಎಸ್.ಜೆ.ನಾಯ್ಕ ಅಳ್ವೇಕೋಡಿ ಅವರು ಮಾರ್ಚ್ 11ರಂದೇ ಅನುಮಾನ ಸಚಿವರಿಗೆ, ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಅನುಮನಾನ ವ್ಯಕ್ತಪಡಿಸಿದಂತೆ ಕಲಭಾಗ ಫೀರ್ಕಾದ ಅಳ್ವೇಕೋಡಿಯ ಹರೀಶ ಡೊಂಗರ್ಸಿ ಗ್ರಾಮ ಸಹಾಯಕನಾಗಿ ಆಯ್ಕೆ ಆಗಿದ್ದಾನೆ!! ಹಾಗಾದರೆ ‘ಉಗ್ರಾಣಿ’ ಸ್ಥಾನಕ್ಕೆ ನೇಮಕ ಮಾಡುವಾಗ ಅನುಸರಿಸಬೇಕಾದ ಮಾನದಂಡಗಳೇನು ಎಂಬುದನ್ನು ಕುಮಟಾ ತಹಸೀಲ್ದಾರರು ಸಾರ್ವಜನಿಕವಾಗಿ ಜಾಹೀರು ಪಡಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.