ಶಿರಸಿ : 2024ರ ಲೋಕಸಭಾ ಚುನಾವಣಾ ಪ್ರಕ್ರಿಯೆ ಆರಂಭಗೊಂಡ ಕ್ಷಣದಿಂದ ಉತ್ತರ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರ ಇಡೀ ರಾಷ್ಟ್ರದ ಗಮನ ಸೆಳೆದದ್ದು ಸಂಸದ ಅನಂತಕುಮಾರ ಹೆಗಡೆ ಅವರಿಂದಾಗಿ ಅಂದರೆ ಎಲ್ಲರೂ ಒಪ್ಪಲೇಬೇಕು.
ಜಿಲ್ಲೆಯ ಅಭಿವೃದ್ಧಿಯ ನೆಲೆಯಲ್ಲಿ ಚರ್ಚೆಯಾಗಿ ರಾಷ್ಟ್ರದ ಗಮನ ಸೆಳೆದಿದ್ದರೆ ಅದೊಂದು ಆರೋಗ್ಯಕರ ಬೆಳವಣಿಗೆಯಾಗಿತ್ತು. ಆದರೆ ಕೇವಲ ಅನಂತಕುಮಾರ ಹೆಗಡೆ ಅವರಿಗೆ ಟಿಕೆಟ್ ವಿಷಯವಾಗಿ ಜನರ ಪಟ್ಟಾಂಗಕ್ಕೆ ವಿಷಯವಾಗಿಹೋಯ್ತು. ಪತ್ರಿಕೆಗಳು, ಸುದ್ದಿ ವಾಹಿನಿಗಳು, ಈ ಕುರಿತಂತೆ ವಿಪರೀತ ಸುದ್ದಿ ಮಾಡುತ್ತಲಿದ್ದವು. ಸಾಮಾಜಿಕ ಜಾಲತಾಣಗಳು ಕೂಡ ಅನಂತಕುಮಾರರ ಟಿಕೆಟ್ ಬಗ್ಗೆ ಎರ್ರಾಬಿರ್ರಿ ಚರ್ಚೆಯಲ್ಲಿ ಸಮಯ ಸವೆಯುತ್ತಿದ್ದವು. ಅಂತೂ ನಿನ್ನೆ ಸಂಜೆಯ ಹೊತ್ತಿಗೆ ಬಿಜೆಪಿ ಹೈಕಮಾಂಡ್ ಮಾಜಿ ವಿಧಾನ ಸಭಾಧ್ಯಕ್ಷ
ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಉತ್ತರ ಕನ್ನಡ ಲೋಕಸಭೆ ಟಿಕೆಟ್ ಘೋಷಿಸಿ ಇಷ್ಟು ದಿನದ ಎಲ್ಲ ಚರ್ಚೆಗೆ ಅಂತ್ಯ ಹಾಡಿತು. ಕಾಗೇರಿಗೆ ಟಿಕೆಟ್ ಸಿಕ್ಕಿದೆ ಅನ್ನುವುದಕ್ಕಿಂತ ಅನಂತಕುಮಾರ್ ಅವರಿಗೆ ಟಿಕೆಟ್ ಸಿಕ್ಕಿಲ್ಲ ಎಂಬ
ಸುದ್ದಿಯನ್ನೇ ಬಹುತೇಕ ಎಲ್ಲ ಪತ್ರಿಕೆಗಳೂ ಮುಖಪುಟದಲ್ಲಿ ಬಳಸಿಕೊಂಡಿವೆ. ಅಂದರೆ ಅಷ್ಟರ ಮಟ್ಟಿಗೆ ಉತ್ತರ ಕನ್ನಡದ ಹಾಲಿ ಸಂಸದರು ತಮ್ಮ ಟೆಂಪರ್ ಉಳಿಸಿಕೊಂಡಿದ್ದರು. ಕಾಗೇರಿಯವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಅನಂತಕುಮಾರ ಹೆಗಡೆ ಅವರ ಪಾಳೆಯದಲ್ಲಿ ಆಕ್ರೋಶ, ಬೇಸರ, ಅಚ್ಚರಿ ಎಲ್ಲವೂ ಮಿಸುಕಾಡುತ್ತಿವೆ. ಅನಂತಕುಮಾರರಿಗೆ ಟಿಕೆಟ್ ತಪ್ಪಿದ ಬಗ್ಗೆ ಆರ್.ಎಸ್.ಎಸ್. ಪಡಸಾಲೆಯಲ್ಲಿ ಅಸಮಾಧಾಣದ ಹೊಗೆ ಎದ್ದಿದೆ.
ಇದೀಗ ಹೊಸ ಬೆಳವಣಿಗೆಯೊಂದು ನಡೆಯುತ್ತಿದ್ದು, ಅನಂತಕುಮಾರರು ಸ್ವತಂತ್ರ ಅಭ್ಯರ್ಥಿಯಾಗಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರವನ್ನು ಗೆಲ್ಲಿಸಿಕೊಡಬೇಕು ಎಂಬ ಬಗ್ಗೆ ಅವರ ಮೇಲೆ ಒತ್ತಡ ಜಾಸ್ತಿಯಾಗುತ್ತಿದ್ದೆ. ಹೀಗೆ ಅನಂತಕುಮಾರರು ಗೆದ್ದರೆ ಹಿಂದುತ್ವಗೆದ್ದಂತೆ ಎಂಬುದನ್ನೂ ಅವರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ನಿನ್ನೆಯಿಂದ ಸಿದ್ದಾಪುರ ಸಹಿತ ಜಿಲ್ಲೆಯಾದ್ಯಂತ ಅವರ ಅಭಿಮಾನಿಗಳೂ ಸಂಸದರನ್ನು ಒತ್ತಾಯಿಸುತ್ತಿರುವುದಾಗಿ ತಿಳಿದುಬಂದಿದೆ. ನಿನ್ನೆ ರಾತ್ರಿಯಿಂದಲೇ ಅನಂತಕುಮಾರರ ಮನೆಗೆ ಜನರ ದಂಡು ಬರುತ್ತಿದ್ದು ಮುಂದಿನ ನಡೆಯ ಬಗ್ಗೆ ಗಂಭೀರವಾಗಿ ಚರ್ಚಿಸುತ್ತಿದ್ದಾರೆ. ಆರು ಅವಧಿಗೆ ಬಿಜೆಪಿಯನ್ನು ಗೆಲ್ಲಿಸಿಕೊಂಟ್ಟು ಈಗ ಅವರು ಚುನಾಯಿತ ಸಂಸದರಾಗಿರುವಾಗಲೇ ಟಿಕೆಟ್ ನೀಡದೇ ಅವಮಾನಿಸಿ ಅವರ ರಾಜಕೀಯ ನಾಯಕತ್ವಕ್ಕೆ ಅಂತ್ಯ ಹಾಡಲು ಹೊರಟಿರುವುದು ಸರಿಯಲ್ಲ. ಇದಕ್ಕೆ ಉತ್ತರ ಕೊಡಬೇಕು ಅಂದರೆ ಅನಂತಕುಮಾರರು ಸ್ವತಂತ್ರವಾಗಿ ಸ್ಪರ್ಧಿಸಲೇ ಬೇಕು ಎಂದು ಅಭಿಮಾನಿಗಳು ಧ್ವನಿ ಎತ್ತುತ್ತಿದ್ದಾರೆ. ಸಮಯಸಾಧಕರಿಂದ ಹಿಂದುತ್ವ ಈ ನೆಲದಲ್ಲಿ ಉಳಿಯಲಾರದು, ಅನಂತಕುಮಾರ ಹಗಡೆಯವರಿಂದ ಮಾತ್ರ ಉತ್ತರ ಕನ್ನಡದಲ್ಲಿ ಹಿಂದುತ್ವ ಚಿಗುರಲು ಸಾಧ್ಯ. ಈ ಕಾರಣಕ್ಕೆ ಸಂಸದರು ಸ್ಪರ್ಧಿಸಲೇ ಬೇಕು. ಆರು ಅವಧಿಯ ಹಿಂದುತ್ವದ ಹೋರಾಟ ಒಂದು ಪಕ್ಷದ ಟಿಕೆಟ್ ನಿಂದ ನಿಲ್ಲಬಾರದು ಅದಕ್ಕಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲೇ ಬೇಕು ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಜಿಲ್ಲೆ ಮಾತ್ರವಲ್ಲ, ರಾಜ್ಯ, ರಾಷ್ಟ್ರ ಮಟ್ಟದ ಹಿಂದುತ್ವವಾದಿಗಳೂ, ಆರ್.ಎಸ್.ಎಸ್. ಕೆಲ ಪ್ರಮುಖರು ಜೊತೆಗೆ ಬಿಜೆಪಿಯ ಕೆಲ ಮುಖಂಡರೂ ಅನಂತಕುಮಾರರು ಸಂಸತ್ತಿನಲ್ಲಿ ಇರಬೇಕು ಎಂದು ಅನಂತಕುಮಾರರಿಗೆ ದೂರವಾಣಿಯಲ್ಲಿ ಮಾತನಾಡುತ್ತಿರುವುದಾಗಿ ತಿಳಿದುಬಂದಿದೆ.
ಆದರೆ ಅನಂತಕುಮಾರ ಹೆಗಡೆ ಅವರು ಸ್ವತಂತ್ರವಾಗಿ ಸ್ಪರ್ಧಿಸುವ ಬಗ್ಗೆ ಯಾರಿಗೂ ಏನನ್ನೂ ಉತ್ತರ ನೀಡಿಲ್ಲ. ಅವರು ಸ್ವತಂತ್ರವಾಗಿ ಸ್ಪರ್ಧಿಸಿದರೆ ಬಿಜೆಪಿ ಸಹಿತ ಎಲ್ಲ ಪಕ್ಷಗಳ ಹಿಂದುತ್ವವಾದಿಗಳು ಬಹುಮತದಿಂದ ಗೆಲ್ಲಿಸುತ್ತಾರೆ ಎಂಬುದರಲ್ಲಿ ಯಾವ ಸಂಶಯವೂ ಎಲ್ಲ ಎಂದು ಅವರ ಆಪ್ತರೊಬ್ಬರು ‘ಹಣತೆವಾಹಿನಿ’ಗೆ ತಿಳಿಸಿದ್ದಾರೆ,.