ಮೇ 10. ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ

ಉತ್ತರ ಕನ್ನಡದ ಬಹು ವರ್ಷಗಳ ಕನಸು ನನಸಾಗಲು ಶುಭಾರಂಭದ ಕ್ಷಣ

ಹೊನ್ನಾವರ : ಉತ್ತರ ಕನ್ನಡ ಜಿಲ್ಲೆಗೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೊಡಿ ಎಂಬುದು ಹಲವು ವರ್ಷಗಳ ಕೂಗು ಸ್ಥಳೀಯರದ್ದು. ಅದಕ್ಕಾಗಿ ಸರಕಾರಕ್ಕೆ ಸಾಲು ಸಾಲು ಮನವಿ ಪತ್ರ ರವಾನೆ, ಹೋರಾಟ,  ಧರಣಿ, ಪ್ರತಿಭಟನೆ ಇವೆಲ್ಲ ಒಂದರ ಬೆನ್ನಿಗೆ ಒಂದರಂತೆ ನಡೆಯುತ್ತಲೇ ಇವೆ.

ಆದರೆ ಈ ಕೂಗಿಗೆ ಸರಕಾರ ಜಾಣ ಕುರುಡು, ಜಾಣ ಕಿವುಡು, ಜಾಣ ಮೌನ ಪ್ರದರ್ಶಿಸುತ್ತಲೇ ಬಂದಿತು. ಬಂಡವಾಳ ಹೂಡಬಹುದಾದ ಉದ್ಯಮಿಗಳೂ ನಾನಾ ಲೆಕ್ಕಾಚಾರ ಮಾಡುತ್ತ ಉತ್ತರ ಕನ್ನಡದತ್ತ ಕಣ್ಣೆತ್ತಿಯೂ ನೋಡಲಿಲ್ಲ.‌ ಕೆಲ ರಾಜಕಾರಣಿಗಳು ಈ ಸೂಪರ್ಸ್ಪೆ ಷಾಲಿಟಿ ಆಸ್ಪತ್ರೆಯ ಕೂಗನ್ನು ತಮ್ಮ ರಾಜಕೀಯ ಅಸ್ತಿತ್ವ ಸ್ಥಾಪಿಸಲು, ಪ್ರಚಾರ ಪಡೆಯಲು ಆಹಾರ ಮಾಡಿಕೊಂಡರು. ಇವೆಲ್ಲ  ಜಿಲ್ಲೆಯ ಜನರಿಗೆ ನಿರಾಸೆಯೇ  ಕಟ್ಟಿಕೊಡುತ್ತಿತ್ತು.

ಜಿಲ್ಲೆಯ ಜನರ ಹತಾಶೆಗೆ ಪೂರ್ಣವಿರಾಮ ಇಡಲು ಇದೀಗ ತಾಲೂಕಿನ ಗೇರಸೊಪ್ಪೆಯ ಶ್ರೀ ಕ್ಷೇತ್ರ ಬಂಗಾರಮಕ್ಕಿ ಮತ್ತು ಬೆಂಗಳೂರಿನ ಸುದೀಕ್ಷಾ ಹೆಲ್ತ್ ಕೇರ್ ಪ್ರೈವೆಟ್ ಲಿಮಿಟೆಡ್ ಸಹಯೋಗದಲ್ಲಿ ಬಂಗಾರಮಕ್ಕಿಯಲ್ಲಿ      ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ  ನಿರ್ಮಿಸಲಾಗುತ್ತಿದ್ದು  ಅದರ ಭವ್ಯ ಕಟ್ಟಡದ ಶಂಕುಸ್ಥಾಪನೆಯನ್ನು  ಮೇ 10 ರಂದು
ಅಕ್ಷಯ ತೃತೀಯದ ಶುಭ ಘಳಿಗೆಯಲ್ಲಿ ಮುಂಜಾನೆ ಇಟ್ಟುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಇತ್ತೀಚೆಗಷ್ಟೇ  ಶ್ರೀ ಬಂಗಾರಮಕ್ಕಿ ಕ್ಷೇತ್ರದ ಶ್ರೀ ಮಾರುತಿ ಗುರೂಜಿ ಮತ್ತು ಸುದೀಕ್ಷಾ ಹೆಲ್ತ್ ಕೇರ್ ಪ್ರೈವೆಟ್ ಲಿಮಿಟೆಡ್ ನ ಸಿ.ಎಂ.ಡಿ. ಸುಬ್ರಹ್ಮಣ್ಯಂ ಶರ್ಮ ಗೌರವರಂ ಅವರು ಜಂಟಿಯಾಗಿ ಕ್ಷೇತ್ರದಲ್ಲಿ ನಡೆದ ಮಲೆನಾಡು ಉತ್ಸವದ ಉದ್ಘಾಟನೆಯ ಸಂದರ್ಭದಲ್ಲಿ ಜಿಲ್ಲೆಗೆ  ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಿಕೊಡಲಾಗುವುದು ಎಂದು ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಈ‌ ಮಹತ್ವದ ಘೋಷಣೆ ಮಾಡಿದ  ಹೊಣೆಯ ಮುಂದುವರೆದ ಭಾಗವಾಗಿ ಆಸ್ಪತ್ರೆ ಕಟ್ಟಡದ ಶಂಕುಸ್ಥಾಪನಾ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರದ ಶ್ರೀ ವೀರಾಂಜನೇಯ ಸಭಾಭವನದಲ್ಲಿ ಮೇ 10 ಅಕ್ಷಯ ತೃತೀಯದ ಪವಿತ್ರ ಘಳಿಗೆಯಲ್ಲಿ ಇಟ್ಟುಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಶ್ರೀ ಮಾರುತಿ ಗುರೂಜಿ, ಸುಧೀಕ್ಷಾ ಗ್ರೂಪ್ ನ ಸುಬ್ರಹ್ಮಣ್ಯಂ  ಗೌರವರಂ ಹಾಗೂ ನಾಡಿನ ಹಿರಿಯ ವೈದ್ಯರು, ಸಾಹಿತಿಗಳು, ಪತ್ರಕರ್ತರು, ಅಂತರರಾಷ್ಟ್ರೀಯ ಮಟ್ಟದ ಕಟ್ಟಡ ವಿನ್ಯಾಸಕಾರರು ,ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಮುಂತಾದವರೆಲ್ಲ ಪಾಲ್ಗೊಳ್ಳುತ್ತಿದ್ದಾರೆ.

ಆಸ್ಪತ್ರೆಯ ಶಂಕುಸ್ಥಾಪನಾ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಇನ್ನಷ್ಟೇ ಕ್ಷೇತ್ರದಿಂದ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ಕ್ಷೇತ್ರದ ಆಡಳಿತಾಧಿಕಾರಿ ಮಂಜುನಾಥ ಎಂ.ಎನ್.  ‘ಹಣತೆ ವಾಹಿನಿ’  ಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *