ರೇಲ್ವೇ ಗೇಟ್ ಬದಲು ಮೇಲ್ಸೇತುವೆ ನಿರ್ಮಿಸಲು ಗ್ರಾಮಸ್ಥರ ಆಗ್ರಹ
ಹೊನ್ನಾವರ: ತಾಲೂಕಿನ ಅನಂತವಾಡಿ ಗ್ರಾಮ ಪಂಚಾಯತ ವ್ಯಾಪ್ತಿಯ ಕೋಟ, ತುಂಬೆಬೀಳು ಗ್ರಾಮಸ್ಥರು ತಮ್ಮೂರಿನ ರೇಲ್ವೇಗೇಟ್ (LC-68E) ಅವೈಜ್ಞಾನಿಕವಾಗಿದ್ದು, ಅದನ್ನು ತೆಗೆದು ಮೇಲ್ಸೇತುವೆ ನಿರ್ಮಾಣ ಮಾಡಿಕೊಡುವಂತೆ ಕಳೆದ 30 ವರ್ಷಗಳಿಂದ ಮನವಿ ಮಾಡುತ್ತಲೇ ಬಂದಿರುತ್ತಾರೆ. ಆದರೂ ಸಚಿವರು, ಶಾಸಕರು, ಅಧಿಕಾರಿಗಳು ರೇಲ್ವೇ ಇಲಾಖೆ ಯಾರೂ ಈ ಬಗ್ಗೆ ಗಮನ ಕೊಡುತ್ತಿಲ್ಲ. ಇದೀಗ ಮೇ 7 ರಂದು ಲೋಕಸಭಾ
ಚುನಾವಣೆ ನಡೆಯುತ್ತಿದ್ದು, ಈ ಚುನಾವಣೆಯಲ್ಲಿ ತಾವೆಲ್ಲ ಗ್ರಾಮಸ್ಥರು ತಮ್ಮ ಮನವಿಯ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಮತ ಚಲಾಯಿಸದೇ ಬಹಿಷ್ಕರಿಸುತ್ತೇವೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಗಜಾನನ ನಾಯ್ಕ ತಿಳಿಸಿದ್ದಾರೆ.

ಚುನಾವಣಾ ಬಹಿಷ್ಕಾರದ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೂ ತಂದಿದ್ದು ತಮ್ಮ ಬೇಡಿಕೆ ಈಡೇರುವವರೆಗೆ ಯಾವುದೇ ಕಾರಣಕ್ಕೂ ತಾವ್ಯಾರೂ ಚುನಾವಣೆಯಲ್ಲಿಪಾಲ್ಗೊಳ್ಳುವುದಿಲ್ಲ.

ಅನಂತವಾಡಿ ರೇಲ್ವೇಗೇಟ್ ಬದಲು ಮೇಲ್ಸೇತುವೆ ನಿರ್ಮಿಸಲು ಸ್ಥಳೀಯವಾಗಿಯೇ ನೈಸರ್ಗಿಕವಾಗಿ ಅವಕಾಶ ಇದ್ದರೂ ನಮ್ಮ ಮನವಿಗೆ ಕೊಂಕಣ ರೇಲ್ವೇ ಕಾರ್ಪೋರೇಷನ್ ಸ್ಪಂದಿಸುತ್ತಿಲ್ಲ. 30 ವರ್ಷಗಳ ಹಿಂದೆ ಕೊಂಕಣ ರೇಲ್ವೇ ಹಳಿ ನಿರ್ಮಿಸುವಾಗ ಹಳ್ಳಿಗರಾದ ನಮಗೆ ಇದರ ಸಾಧಕ ಬಾಧಕ ಅರಿವಿಗೆ ಬಂದಿರಲಿಲ್ಲ.

ಈಗ ಈ ಸಮಸ್ಯೆಯನ್ನು ಸಂಬಂಧಪಟ್ಟವರ ಗಮನಕ್ಕೆ ತಂದರೆ ಅವಗಣನೆ ಮಾಡುತ್ತಿದ್ದಾರೆ. ಈ ಎಲ್ಲ ಕಾರಣಕ್ಕಾಗಿ ತಮ್ಮೂರ ಈ ಸಮಸ್ಯೆ ಬಗೆಹರಿಯದೇ ತಾವ್ಯಾರೂ ಚುನಾವಣೆಯಲ್ಲಿ ಮತಗಟ್ಟೆಗೆ ಹೋಗಿ ಮತ ಚಲಾಯಿಸಲು ಸಾಧ್ಯವಿಲ್ಲ ಎಂದು ನಾಯ್ಕ ತಿಳಿಸಿದ್ದಾರೆ.