ಚುನಾವಣೆ : ಟ್ರಾವೆಲ್ಸ್ ಕಂಪನಿಗಳಿಂದ ‘ಪಿಕ್ ಪೊಕೆಟ್’

ಚುನಾವಣೆಗಾಗಿ ಊರಿ ಹೋಗಿ ಮತ ಹಾಕಿ ವಾಪಸ್ ಬರಲು ಓರ್ವನ ಜೇಬಿನಿಂದ ಏನಿಲ್ಲವೆಂದರೂ ₹ 4000 ನಾಪತ್ತೆಯಾಗಿ ಬಿಡುತ್ತದೆ.

ಬೆಂಗಳೂರು : ಶಿವಮೊಗ್ಗ , ಉತ್ತರ ಕನ್ನಡ ಸಹಿತ ಉತ್ತರ ಕರ್ನಾಟಕ ಎಲ್ಲ ಜಿಲ್ಲೆಗಳಲ್ಲಿ ಇಂದು‌ ದಿನಾಂಕ‌ 7 ಮೇ 2024 ಲೋಕಸಭಾ ಚುನಾವಣೆ ನಡೆಯುತ್ತಿದೆ. ತಮ್ಮದೊಂದು  ಓಟ್ ಮಿಸ್ ಆಗಬಾರದು ಎಂಬ ಕಾರಣಕ್ಕೆ , ತಾವು ಇಷ್ಟ ಪಟ್ಟ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಅಥವಾ ತಮ್ಮ ಅಭಿಮಾನದ ರಾಜಕೀಯ ಪಕ್ಷವನ್ನು ಬೆಂಬಲಿಸಲು
ರಾಜಧಾನಿಯಲ್ಲಿ ಉದ್ಯೋಗ ಹುಡುಕಿಕೊಂಡು ನೆಲೆಸಿದ ಜನ ತಮ್ಮ ತಮ್ಮ ಊರುಗಳಿಗೆ ತುಂಬ ಉತ್ಸಾಹದಿಂದ ಹೊರಟು ಹೋಗಿದ್ದಾರೆ‌. ಪ್ರಜಾಪ್ರಭುತ್ವದ ಸೌಂದರ್ಯ ಇರುವುದೇ ಇಂಥ ಚುನಾವಣೆಯಲ್ಲಿ. ಚುನಾವಣೆ ಅಂದರೆ ಅದೊಂದು ಹಬ್ಬ ಅಂತ ಇಂಥ ಜನರೇ ಭಾವಿಸುತ್ತಾರೆ‌.

ಹೀಗೆ ಚುನಾವಣೆಗಾಗಿ ರಾಜಧಾನಿಯಿಂದ ಅವರರವರ ಊರಿಗೆ ಹೋಗಿ ಬರುವಾಗ ಖಾಸಗಿ ಟ್ರಾವೆಲ್ಸ್ ಕಂಪನಿಗಳು ‘ಪಿಕ್ ಪಾಕೆಟ್’ ಮಾಡಿ ಜನರನ್ನು ಶೋಷಣೆ ಮಾಡುತ್ತಿವೆ ಎಂಬುದು ಅಸಹನೀಯ.

ನಿತ್ಯ ಬೆಂಗಳೂರು, ಮೈಸೂರುಗಳಿಂದ‌ ನೂರಾರು ಬಸ್ ಗಳು ಬೇರೆ ಬೇರೆ ಜಿಲ್ಲೆಗಳಿಗೆ ಹೋಗಿ ಬರುತ್ತವೆ. ಇಂದು ಚುನಾವಣೆ ನಿಮಿತ್ತ ಇರುವ ಬಸ್ ಸಾಲದೇ ಟ್ರಾವೆಲ್ಸ್ ಕಂಪನಿಗಳು ಗ್ಯಾರೇಜ್ ನಲ್ಲಿದ್ದ ಎಕ್ಸ್ಟ್ರಾ ಲಟಾರಿ ಬಸ್ ಗಳನ್ನೂ ಹಾಕಿ  ದುಡ್ಡು ಗೋಚುತ್ತಿವೆ. ನಗರದ ಗಾಂಧಿನಗರ, ಕಲಾಸಿಪಾಳ್ಯಗಳಂತೂ ಖಾಸಗಿ ಬಸ್ ಗಳ ಕಾಳಸಂತೆಯ ಅಡ್ಡೆಯಾಗಿದೆ.

ನಿತ್ಯ ₹700-₹800 ಚಾರ್ಜ್ ಮಾಡುವ ಖಾಸಗಿ ಬಸ್ ಗಳು ಇದೀಗ ಚುನಾವಣೆ ನಿಮಿತ್ತ ₹1500 ರಿಂದ ₹1800 ರ ವರೆಗೂ, ಕೆಲವು ಬಸ್ ಗಳು ₹ 2000 ಮಾಡಿ ಜನರ ತಲೆಯನ್ನು ನುಣ್ಣಗೆ ಬೋಳಿಸುತ್ತಿವೆ. ಚುನಾವಣೆ ಹೆಸರಿನಲ್ಲಿ ಇದೊಂಥರ ರೀತಿಯಲ್ಲಿ ಹಗಲು ದರೋಡೆಯನ್ನೇ ಖಾಸಗಿ ಬಸ್ ಗಳು ಮಾಡುತ್ತಿವೆ. ಇದು ಎಷ್ಟು ಅತಿರೇಕಕ್ಕೆ ಹೋಗಿದೆ ಅಂದರೆ ಟಿಕೆಟ್ ದರದ ಮೂರು ಪಟ್ಟು ವಾಮ ಮಾರ್ಗದಲ್ಲಿ ಹೆಚ್ಚಿಸಿಕೊಂಡರೂ ರಾಜಾರೋಷವಾಗಿ ಕಂಪ್ಯೂಟರೈಸ್ಡ್ ಟಿಕೇಟ್ ನ್ನೇ ಕೊಟ್ಟು ಮೀಸೆ ತುರುವುತ್ತಾರೆ ಟ್ರಾವೆಲ್ಕಂ ಪನಿ ಮಾಲಕರು. ಒಟ್ಟಾರೆ ಚುನಾವಣೆಗಾಗಿ ಊರಿ ಹೋಗಿ ಮತ ಹಾಕಿ ವಾಪಸ್ ಬರಲು ಓರ್ವನ ಜೇಬಿನಿಂದ ಏನಿಲ್ಲವೆಂದರೂ ₹ 4000 ನಾಪತ್ತೆಯಾಗಿ ಬಿಡುತ್ತದೆ.

‘ಚುನಾವಣೆಯಲ್ಲಿ ಒಂದೊಂದು ಮತದ  ಬೆಲೆ ತುಂಬ ಅಮೂಲ್ಯ. ಸಶಕ್ತ ಭಾರತ ನಿರ್ಮಾಣ ವಾಗಬೇಕಾದರೆ ಜನರು ಚುನಾವಣೆಯಲ್ಲಿ ಪಾಲ್ಗೊಳ್ಳುವುದು ಅತಿ ಅಮೂಲ್ಯ’ ಎಂದೆಲ್ಲ ಸಂದೇಶ ರವಾನಿಸುವ ಸರಕಾರ ಇಲ್ಲಿ, ಚುನಾವಣೆಗೆ ಹೋಗುವ ಮತದಾರರನ್ನು ಖಾಸಗಿ ಟ್ರಾವೆಲ್ಸ್ ಕಂಪನಿಗಳು ಟೆಕೆಟ್ ದರ ಏರಿಸಿ ನುಣ್ಣಗೆ ಬೋಳಿಸಿ ಕಾಳಸಂತೆಯಲ್ಲಿ ಹಣ ಮಾಡಿಕೊಳ್ಳುತ್ತಿರುವುದನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ.

ಈ ಹಗಲು ದರೋಡೆ ಕೇವಲ ಚುನಾವಣೆಗಾಗಿ ಮಾತ್ರವಲ್ಲ, ಪ್ರತಿ ವೀಕ್ ಎಂಡ್ ಗಳಲ್ಲೂ ಇದೇ ಕಥೆ, ಪ್ರತಿ ಹಬ್ಬಗಳಲ್ಲೂ ಇದೇ ವ್ಯಥೆ. ಚೌತಿ, ದೀಪಾವಳಿ, ಯುಗಾದಿ, ದಸರಾ ಹಬ್ಬಗಳ ಸಂದರ್ಭಗಳಲ್ಲಂತೂ ಈ ಟ್ರಾವೆಲ್ ಕಂಪನಿಗಳ ಕೊಯ್ಲು ವಿಪರೀತ. ಸರಕಾರ ಕಂಡೂ ಕಾಣದಂತೆ, ಕೇಳಿಯೂ ಕೇಳದಂತೆ ನಾಟಕ ಮಾಡುತ್ತಿದೆ.

ಬಸ್ ಸ್ಟ್ಯಾಂಡಿನಲ್ಲಿ ಪಿಕ್ ಪಾಕೆಟ್ ಮಾಡಿದ ಅಬ್ಬೆಪಾರಿಯನ್ನು ಎಳೆದುಕೊಂಡು ತಂದು ಪಾಟಿ ಹಿಡಿಸಿ ಕೇಸು ಜಡಿಯುವ ಪೊಲೀಸರಿಗಾಗಲೀ, ಸಾರಿಗೆ ಇಲಾಖೆಗಾಗಲೀ ಇವ್ಯಾವುದೂ ಗೊತ್ತಾಗುವುದಿಲ್ಲವೇ?

ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಂಡು ಖಾಸಗಿ ಟ್ರಾವೆಲ್ಸ್ ಕಂಪನಿಗಳ ಹಗಲು ದರೋಡೆಯನ್ನು ತಪ್ಪಿಸಬೇಕು ಎಂಬುದು ‘ಹಣತೆ ವಾಹಿನಿ’ ಯ ಆಶಯ.

Leave a Reply

Your email address will not be published. Required fields are marked *