ಮಾಯಾಮೃಗ

ನಿದ್ದೆ ಎಚ್ಚರಗಳ ಗಡಿನಾಡಿನಲ್ಲಿ
ಫಕ್ಕನೆ ಕಂಡತಾoಗಿ
ಮಾಯವಾಗುವದು ಕನಸಿನ
ಇಂದ್ರಧನಸ್ಸುಗಳ ಮರೆಗೆ.

ಖುಷಿ ಬಂದರೆ ತಾನೇತಾನಾಗಿ
ಹಿಂದೆ ಹಿಂದೆ ಬರುವದಂತೆ ಅದು
ಪರ್ವತಗಳನ್ನು
ಮತ್ತೆ ಮತ್ತೆ ಮುದ್ದಿಸುವ
ಮಳೆ ಮೋಡದಂತೆ.

ಇದರ ಜೊತೆ ಗೆಳೆತನ
ಸಾಧಿಸಿದ ಗಾರುಡಿಗರನ್ನು
ಆ ಕುರಿತು ಕೇಳಿದರೆ
ಬರಿದೆ ನಕ್ಕುಬಿಡುತ್ತಾರಂತೆ.

ಅದು ಬೇಕೇಬೇಕೆಂಬ,
ಹಿಡಿದು ಪಳಗಿಸುವೆನೆಂಬ
ಹಟದಲ್ಲಿ ಬೆಂ
ಬತ್ತಿ ಹೋದವರು ಮಾತ್ರ
ನಾಪತ್ತೆಯಂತೆ.

ಮೊನ್ನೆ ಮಳೆ ನಿಂತ ಮಧ್ಯಾಹ್ನ
ತೊರೆಯಂಚಿನ ಗರಿಕೆ
ಮೆಲ್ಲಲು ಹೊರಟದ್ದು
ಕಣ್ಣರಳಿಸಿ ಕಿವಿನಿಮಿರಿಸಿ
ಯಾಕೆ ನಿಂತಿತದು ಅರೆಕ್ಷಣ
ಪರ್ಣಕುಟಿಯ ಮುಂದೆ?

ವಾಲ್ಮೀಕಿಯೂ ಕಂಡಿರಬಹುದೆ
ಇದರ ಚಿಗುರು ಕೋಡಿನ ಬೆರಗು
ತನ್ನವೇ ಕವಿತೆ ಸಾಲುಗಳ
ನಡುವೆ.

ಕವಿ :
ಶರದ ಸೌಕೂರ,
ಮುಂಬಯಿ

Leave a Reply

Your email address will not be published. Required fields are marked *