ಮನುಷ್ಯ ಮನುಷ್ಯತ್ವವನ್ನು ಜಿನುಗಿಸಲಿ…

ಮನಸ್ಸಿನ ಬೆಳವಣಿಗೆಯು ಮಾನವನ ಅಸ್ತಿತ್ವದ ಅಂತಿಮಗುರಿಯಾಗಿರಬೇಕು
– ಬಿ.ಆರ್.ಅಂಬೇಡ್ಕರ್)


ಉತ್ತರ ಭಾರತದ ಪ್ರಸಿದ್ಧ ಸಂತ ರವಿದಾಸರ ಕತೆಯೊಂದು ಹೀಗಿದೆ :
ಒಮ್ಮೆ ಶಿಷ್ಯರೊಡನೆ ಸಂತರವಿದಾಸರು ಹೊಳೆಯೊಂದನ್ನು ದಾಟುತ್ತಿದ್ದಾಗ ಚೇಳೊಂದು ನೀರಿನಲ್ಲಿ ಮುಳುಗೇಳುತ್ತ ಹೊರಬರಲಾರದೆ ಜೀವಚೆಲ್ಲುವ ಸ್ಥಿತಿಯಲ್ಲಿರುವುದನ್ನು ಕಂಡರು. ಮರುಕದಿಂದ ಅದನ್ನೆತ್ತಿ ದಡಕ್ಕೆ ಬಿಟ್ಟಾಗ ಆ ಚೇಳು ಅವರಿಗೊಮ್ಮೆ ಬಲವಾಗಿ ಕುಟುಕಿ, ಆಯತಪ್ಪಿ ಮತ್ತೆ ನೀರಿನಲ್ಲಿ ಬಿದ್ದಿತು.

ರವಿದಾಸರು ಮತ್ತೊಮ್ಮೆ ಅದನ್ನು ರಕ್ಷಿಸಿ ದಡ ಸೇರಿಸಿದಾಗ ಮತ್ತದೇ ಹಿಂದಿನ ಘಟನೆಯೇ ಪುನರಾವರ್ತನೆಯಾಯಿತು. ಇದು ಹೀಗೆಯೇ ಹಲವು ಬಾರಿ ಪುನರಾವರ್ತನೆಯಾದಾಗ, ಬೇಸರಗೊಂಡ ಶಿಷ್ಯನೊಬ್ಬ ‘ಗುರುಗಳೇ, ಹಲವು ಬಾರಿ ನೀವದನ್ನು ರಕ್ಷಿಸಲುಯತ್ನಿಸುತ್ತಿದ್ದರೂ ಆ ಚೇಳು ಮಾತ್ರ ತಮಗೆ ಕುಟುಕುತ್ತಲೇ ಇದೆ. ನೀವೇಕೆ ಅದನ್ನು ಸಾಯಲು ಬಿಡಬಾರದು?’ ಎಂದ.
ರವಿದಾಸರು ಶಿಷ್ಯನತ್ತ ತಿರುಗಿ, ‘ಪ್ರಿಯ ಶಿಷ್ಯ, ನಾವ್ಯಾರು? ಮನುಷ್ಯರು! ಆ ಜಂತುವಿನ ಹೆಸರೇನು? ಚೇಳು!…ಯಾವುದೇ ಆಪತ್ಕಾಲದಲ್ಲಿಯೂ ಜೀವರಕ್ಷಿಸಬೇಕಾದ ಮೂಲಗುಣ ಮನುಷ್ಯರದ್ದು. ಆದರೆ ಅದೊಂದು ಜಂತು ಸರಿ-ತಪ್ಪು ತಿಳಿಯದು. ಕುಟುಕುವುದದರ ಮೂಲ ಗುಣ’ ಎಂದಾಗ ಗುರುವಿನ ಕಣ್ಣ ಹೊಳಪು ಶಿಷ್ಯನ ಅರಿವಿನ ಬೆಳಕಾಯಿತು.
ಜಗತ್ತು ಪಾಲಿಸಬೇಕಾದ ಪಾಠವಿದು.
ಜಾತಿ, ಧರ್ಮ, ಭಾಷೆ, ಲಿಂಗ, ನೆಲ ಮೊದಲಾದ ಎಲ್ಲ ಗಡಿಗಳಾಚೆ ನಿಂತು ನೊಂದವರ ಕಣ್ಣೀರು ಕೊನೆಗಾಣಿಸಬೇಕಾದದ್ದು ಮನುಷ್ಯ ಲೋಕದ ಮಹೋನ್ನತ ಹೊಣೆಗಾರಿಕೆ. ವಿವಿಧ ಧರ್ಮ-ಜನಾಂಗಗಳ ನಡುವಿನ ವಿಪ್ಲವತೆಯು ಘರ್ಷಣೆಗೆ ಸಾಗಿ ಅಸಂಖ್ಯಾತ ಜನರ ಜೀವ ಹಾನಿಗೆ ಕಾರಣವಾಗುತ್ತಿರುವ ವರ್ತಮಾನ ನಮ್ಮೆಲ್ಲರದು. ನ್ಯಾಯದ ತಕ್ಕಡಿ ಅನ್ಯಾಯದೆಡೆಗೆ ತೂಗುತ್ತಿರುವುವಾಗ ಜಾಣ ಮೌನದಿಂದಿರುವುದು ನಾಗರಿಕತೆಯ ಲಕ್ಷಣವಲ್ಲ.
ನಮ್ಮದೇಶವನ್ನು ಒಳಗೊಂಡಂತೆ ಜಗತ್ತಿನ ವಿವಿಧ ರಾಷ್ಟçಗಳು ಉಕ್ರೇನ್-ರಷ್ಯಾ, ಪ್ಯಾಲೆಸ್ತೇನ್-ಇಸ್ರೇಲ್‌ಗಳಂತೆ ಪರಸ್ಪರ ಕಾದಾಟಕ್ಕಿಳಿದರೆ ಮನುಷ್ಯನ ಬೌದ್ಧಿಕ ವಿಕಾಸ ಕುರಿತಾದ ವ್ಯಾಖ್ಯಾನಗಳೆಲ್ಲ ಪೊಳ್ಳಾಗಿ ಬಿಡುತ್ತವೆ.
ಹಾಗಾದರೆ ಮನುಷ್ಯ ಜಗತ್ತಿನ ಈ ನಿರಂತರ ವಿಪ್ಲವಗಳಿಗೆ ಪರಿಹಾರವೇನು?
ತನ್ನ ಹಿರಿಮೆಗೆ Sixth Sense ಗರಿಮೆಗಾಗಿ ಹಾತೊರೆಯದೆ Common Sense ಅನ್ನೇSixth Sense ಆಗಿ ಪರಿಭಾವಿಸುವುದು. ತನ್ಮೂಲಕ, ಶ್ರೇಷ್ಠತೆಯ ವ್ಯಸನದಿಂದ ಹೊರಬಂದು ಯಾವುದೇ ಭಿನ್ನತೆಗಳಿಗೆ ಅವಕಾಶವಿಲ್ಲದಂತೆ ಸಹ ಮನುಷ್ಯರೆಲ್ಲ ತನ್ನಂತೆಯೇ ಎಂಬ ಸರ್ವ ಸಮಾನತಾ ಭಾವಕ್ಕೆ ಶರಣಾಗುವುದು ಈ ವಿಪ್ಲವಗಳಿಗಿರಬಹುದಾದ ಆತ್ಯಂತಿಕ ಪರಿಹಾರ.
ವ್ಯಕ್ತಿ, ಕುಟುಂಬ, ಸಮಾಜಗಳ ನಡುವಿನ ಸೌಹಾರ್ದ ಸಂಬಂಧ ಹಾಗೂ ಸಹ ಮಾನವರ ಕುರಿತಾಗಿ ತಾರತಮ್ಯವಿಲ್ಲದ ನಿರ್ವ್ಯಾಜ ಪ್ರೀತಿ ಜಗತ್ತನ್ನು ಯುದ್ಧಗಳಿಂದ ರಕ್ಷಿಸಬಲ್ಲವು. ಜಗತ್ತಿನ ದಾರ್ಶನಿಕರೆಲ್ಲರ ಮಾತು-ಮಂಥನ, ಬದುಕು-ಬರಹಗಳ ಸಾರ ಇದೇ ಆಗಿದೆ.
ಸರಿ-ತಪ್ಪು, ಒಳಿತು-ಕೆಡುಕುಗಳ ನಿಜದ ನಿಷ್ಕರ್ಷೆಯೊಂದು ಇಂದಿನ ಜರೂರು. ಆದರೆ ಅದಕ್ಕೂ ಮೊದಲು ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ (Dr.G.S. Shivarudrappa) ಅವರ ಆಶಯದಂತೆ ಅಹಮ್ಮಿನ ಎಲ್ಲ ಕೋಟೆಗಳನ್ನು ಒಡೆದು ನಮ್ಮೊಳಗಿನ, ನಮ್ಮ ನಡುವಿನ ಪ್ರೀತಿ-ಸ್ನೇಹಗಳನ್ನು ಗುರುತಿಸಿಕೊಂಡರಷ್ಟೇ ಈ ಭೂಮಿ ಉಳಿಯುವುದೆಂಬ ಸಾರ್ವಕಾಲಿಕ ಸತ್ಯವನ್ನು ನಮ್ಮದಾಗಿಸಿಕೊಳ್ಳೋಣ ಎಂಬ ಆಶಯದೊಂದಿಗೆ ಹಿರಿಯ ಚಿಂತಕ ಅರವಿಂದ ಕರ್ಕಿಕೋಡಿ ಅವರು ಹಚ್ಚಿರುವ ಈ ಹಣತೆಯ ಬೆಳಕಿನಲ್ಲಿ ನನ್ನ ಮುಖ ನೀವು-ನಿಮ್ಮ ಮುಖ ನಾನು ಮತ್ತೆ ಮತ್ತೆ ನೋಡುತ್ತಿರೋಣ.


ಹಣತೆ ವಾಹಿನಿ’ಗೆ ಶುಭವಾಗಲಿ. ಸರ್ವರಿಗೂ ಒಳಿತಾಗಲಿ.

ಲೇಖಕರು :
ಪ್ರೊ. ಸಂದೇಶ ಎಚ್ ರತ್ನಪುರಿ
ಮೈಸೂರು

Leave a Reply

Your email address will not be published. Required fields are marked *