ಆರೋಗ್ಯಕರ ಗಾಳಿ, ಸ್ವಚ್ಛ ನೀರು, ಹಾಗೂ ಆಹಾರಉತ್ಪಾದನೆಗೆ ಬೇಕಾದ ಫಲವತ್ತಾದ ಮಣ್ಣುಗಳಂತಹ ಜೀವನಾಧಾರ ವಸ್ತುಗಳ ಸಂರಕ್ಷಣೆಯಅವಶ್ಯಕತೆ ಪ್ರಸ್ತುತ ಸನ್ನಿವೇಶದಲ್ಲಿ ಇದೆ. ಇದನ್ನು ಎಲ್ಲರೂ ಒಪ್ಪಬಹುದಾದರೂ ಮನುಷ್ಯನ ಕ್ಷಣಿಕ ಲಾಭಗಿಟ್ಟಿಸುವ ಹೇಯಕೃತ್ಯದಿಂದಾಗಿ ಹಲವು ಸಮಸ್ಯೆಗಳು ಉದ್ಭವಿಸಿವೆ ಹಾಗೂ ಉದ್ಭವಿಸುತ್ತಲೇ ಸಾಗಿದೆ.
ಒಂದು ವಿಶ್ವವಿಖ್ಯಾತ, ಅಂತರಾಷ್ಟ್ರೀಯ ಪ್ರವಾಸಿ ತಾಣವಾಗಬೇಕಿದ್ದ ಪ್ರದೇಶದ ಸ್ಥಿತಿ ನೋಡಿದಾಗಅತೀವ ಸಂಕಟವೆನಿಸುತ್ತಿದೆ. ರಾಜ್ಯದ ಈ ದೇಶದ ಅಗ್ರಮಾನ್ಯ ದಟ್ಟ ಹಸಿರು ಕಾಡನ್ನೊಳಗೊಂಡ ಉತ್ತರಕನ್ನಡ ಜಿಲ್ಲೆಯ (Uttara Kannada District) ದಾಂಡೇಲಿ (Dandeli) ಯ ಕಾಳಿ ನದಿ (Kali River) ತೀರ ಪ್ರದೇಶದದುರಂತಕತೆಯಿದು. ಅಗ್ರಮಾನ್ಯ ಪ್ರವಾಸಿತಾಣವಾಗಬೇಕಿದ್ದ ಒಂದು ಪ್ರದೇಶಕಂಡಹೀನ ಸ್ಥಿತಿ ರಾಜ್ಯದ ಅಧೋಗತಿಗೆ ಕನ್ನಡಿಯಾಗುತ್ತಿದೆ. ಈ ಪ್ರದೇಶಕ್ಕೆ ಬಂದು ಮಜ ಅನುಭವಿಸಿ ಹೋಗುವ ನಮ್ಮ ಸ್ವಾರ್ಥ ಪರತೆ ಹೇಸಿಗೆ ತರುತ್ತದೆ. ಇಲ್ಲಿನದಟ್ಟನೆಯ ಹರಿದ್ವರ್ಣ ಕಾಡುಗಳು ಪ್ರವಾಸಿಗರಿಗೆ, ಕವಿಗಳಿಗೆ, ಲೇಖಕರಿಗೆ ಹಲವು ರೀತಿಯಚಿಂತನೆಗೆ ಕಾವು ನೀಡಿ ಹೊಗಳಿಕೆಗೆ ಪಾತ್ರವಾಗುವದುರಂತ ನಾಯಕನಂತೆಗೋಚರಿಸುತ್ತಿದೆ. ಈ ನಿಸರ್ಗದತ್ತ ಚೆಲುವಿನ ತಾಣದಲ್ಲಿ ಮಾಣವ ಸೃಷ್ಠಿಸಿದ ಅಕ್ರಮ ಕರಾಳ ಚಿತ್ರಯಾರಿಗೂ ಕಾಣಿಸಿಕೊಳ್ಳುವುದಿಲ್ಲ. ತನ್ನೆಲ್ಲದುಗುಡವನ್ನು ಒಳಗಿಟ್ಟು ಸಹಿಸಿ ನಗುವ ನಿಸರ್ಗ ಮಾತೆಯ ಸಹನಾಶಕ್ತಿಯ ಪರಮಾವಧಿಯೇ ಈ ದಾಂಡೇಲಿಯ ಕಾಳಿಕೊಳ್ಳದ ಸಮೃದ್ಧ ಕಾಡುಗಳು.
ಇಲ್ಲಿಗೆಅಭಿವೃದ್ಧಿಯ ಹೆಸರಿನಲ್ಲಿ ಭಾರೀದೊಡ್ಡದೊಡ್ಡ ಯೋಜನೆಗಳು, ಕಾರ್ಖಾನೆಗಳು, ಆಣೆಕಟ್ಟುಗಳು, ಮೈಬಿಂಗ್, ಪರಿಸರ ಮಾಲಿನ್ಯ, ಬೇಟೆ, ಕಳ್ಳಸಾಗಣೆ, ಪ್ರವಾಸೋದ್ಯಮ ಮಾಫಿಯಾ ಎಲ್ಲವೂ ಕಾಲಿಟ್ಟ ಮೇಲೆ ಇಲ್ಲಿನ ನೈಜ ಸಂಪತ್ತು ಕರಗಿ ಹೋಗುತ್ತಿದೆ. ಸ್ವಚ್ಛಂದವಾಗಿ ಹರಿಯುತ್ತಿದ್ದ ಕಾಳಿ ಇಂದು ಮಲಿನತೆಯಗೂಡಾಗಿದ್ದು, ಜನಜಾನುವಾರು ವನ್ಯಜೀವಿಗಳಿಗೆ ಮಾರಕವಾಗಿದ್ದರೂ, ಸುತ್ತಲಿನ ಪರಿಸರ ವಾಯುಮಾಲಿನ್ಯದಿಂದ ಗಬ್ಬೆದ್ದರೂ ಕೈಗಾರಿಕೋದ್ಯಮಿಗಳಿಗೆ ಪ್ರಮಾಣ ಪತ್ರ ನೀಡುವ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಗಳೇ ಮಲಿನಗೊಂಡಿರುವುದು ವರವಾಗಿ ಪರಿಣಮಿಸಿದೆ.
ವನ್ಯಜೀವಿ, ಹುಲಿ ಯೋಜನೆ, ಎಲಿಫಂಟ್ ಕಾರಿಡಾರ್ (Elephant Corridor),, ಹಾರ್ನ್ಬಿಲ್(Hornbill) ಸಂರಕ್ಷಿತ ಪ್ರದೇಶ, ಅಭಯಾರಣ್ಯಗಳ ಹೆಸರಿನಲ್ಲಿ ಕೇಂದ್ರ ಸರಕಾರದಿಂದ ಕೋಟ್ಯಂತರ ರೂಪಾಯಿ ಹಣ ಹರಿದು ಬಂದರೂ ಸ್ಥಳೀಯರ ವಿಶ್ವಾಸ ಗಿಟ್ಟಿಸಿಕೊಳ್ಳಲಾಗದ ಅಧಿಕಾರಿ ವರ್ಗ, ರಾಜಕಾರಣಿಗಳ ಬೂಟಾಟಿಕೆ, ನಮ್ಮ ಸ್ವಾರ್ಥ, ಸೋಮಾರಿತನ, ದುರಹಂಕಾಎರ, ಕರ್ತವ್ಯಲೋಪ, ಮಿತಿ ಮೀರಿದ ಧನದಾಹ, ಅಧೀಕಾರದ ಅಮಲಿನಲ್ಲಿ ನಿತ್ಯವೂತನ್ನತನವನ್ನು ಕಳೆದುಕೊಂಡು ಸೊರಗುತ್ತಿದೆ ಇಲ್ಲಿನ ಕಾಡು.
ಅಧಿಕಾರಿಗಳ ಅದಕ್ಷತೆ, ಅಸಡ್ಡೆಯಿಂದ ಸುಂದರ ಸುರಕ್ಷಿತ ಪ್ರವಾಸಿತಾಣವಾಗಿ ಅಭಿವೃದ್ಧಿಯಾಗಬೇಕಾದ ಈ ಪ್ರದೇಶದಲ್ಲಿ ಸಿರಿವಂತರ ಟೂರಿಸಂ ಮಾಫಿಯಾ ತಲೆಯೆತ್ತಿ ಸ್ಥಳೀಯರ ಅನ್ನಕ್ಕೂ ಕನ್ನ ಹಾಕಿ ಎಲ್ಲವನ್ನೂ ನಿಯಂತ್ರಣಕ್ಕೊಳಪಡಿಸುತ್ತಿದೆ.
ಈ ಭವ್ಯದೇಶ ಹಾಗೂ ರಾಜ್ಯದ ಪ್ರತಿಷ್ಠೆಯ ಸಮೃದ್ಧಿಯ ಸಂಕೇತವಾಗಬಹುದಿದ್ದಒಂದು ಚೆಲುವಿನ ನಿಸರ್ಗದ ಮಡಿಲು ನಮ್ಮ ಸ್ವಾರ್ಥಕ್ಕೆ ಬಲಿಯಾಗುತ್ತಿದೆ. ಕರ್ನಾಟಕ ಸರಕಾರ ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಯಾಗುವುದು ಎಂದು ಘಂಟಾಘೋಷವಾಗಿ ಸಾರಿತ್ತು. ಆದರೆ ಕಾಳಿಕೊಳ್ಳದ ಪರಿಸರ ಪ್ರವಾಸೋದ್ಯಮದ ಅಭಿವೃದ್ಧಿಗೆ ಸರಕಾರದ ಪಾಲೆಷ್ಟು? ಎಂಬ ಪ್ರಸ್ತಾಪವಿಲ್ಲ. ಸರ್ಕಾರದ ಈ ಪ್ರದೇಶದ ಪ್ರವಾಸೋದ್ಯಮದ ಇಲ್ಲಿನ ಸ್ವಚ್ಛ ಪರಿಸರದ ಅಭಿವೃದ್ಧಿಯ ಕುರಿತಂತೆ ಇನ್ನೂ ಒಂದು ನಿರ್ಧಿಷ್ಟ ಯೋಚನೆ, ಯೋಜನೆ ಇಲ್ಲ! ಸರಕಾರಕ್ಕೆ ಈ ಕಾಡಿನ ಮರಮುಟ್ಟುಗಳಿಂದ, ಜಲ ವಿದ್ಯುತ್‌ನಿಂದ, ಮೈನಿಂಗ್, ಪ್ರವಾಸೋದ್ಯಮದಿಂದ ಆದಾಯ ಬೇಕು. ಈ ರೀತಿಯ ಪ್ರಯೋಜನ ಪಡೆಯುವಾಗ ಆ ಪ್ರದೇಶಕ್ಕೆ ಸೌಲಭ್ಯ ಒದಗಿಸುವ ಜವಾಬ್ದಾರಿ ಸರಕಾರದ ಕರ್ತವ್ಯವಲ್ಲವೇ? ಇವೆಲ್ಲ ಸಂಕಷ್ಟದ ನಡುವೆ ಕಾಳಿಕೊಳ್ಳದ ಕಾಡುಗಳು ತನ್ನ ವ್ಯಥೆಯ ಕತೆ ಹೇಳುತ್ತ ಸೋರಗುತ್ತಿದೆ. ಇವೆಲ್ಲ ಅರಣ್ಯ ರೋದನವಾಗುತ್ತಿರುವುದು ವಿಷಾದನೀಯ.
ಲೇಖಕರು :
ಎನ್. ಜಯಚಂದ್ರನ್,
ದಾಂಡೇಲಿ
ಒಂದು ಕಾಲದಲ್ಲಿ ಇಡೀ ತಾಲೂಕಿಗೆ ಜೀವನೀಡುತ್ತಿದ್ದ ಕಾಳೀ ಜೀವವನ್ನೇ ತನ್ನ ಸ್ವಾರ್ಥಕ್ಕಾಗಿ ಹಿಂಡುತ್ತಿರುವ ಮಾನವ ವರ್ಗ