‘ಕನ್ನಡದ ಹಣತೆ’ಯಿಂದ ‘ಹಣತೆ ವಾಹಿನಿ’ಗೆ ಹರಿದು ಬರುತ್ತಿರುವ ‘ನದಿ’

Hanate

ಈ ಹಿಂದೆ ನನ್ನ ಸಂಪಾದಕತ್ವದಲ್ಲಿ ಮುದ್ರಣವಾಗಿ ಬರುತ್ತಿದ್ದ ‘ಕನ್ನಡದ ಹಣತೆ’ ವಾರಪತ್ರಿಕೆಯಲ್ಲಿ ಹುಟ್ಟಿಕೊಂಡ ‘ನದಿ’ ಇದೀಗ ‘ಹಣತೆ ವಾಹಿನಿ’ ವೆಬ್ ಮಾಧ್ಯಮದಲ್ಲೂ ಹರಿದು ಬರುತ್ತಿರುವುದು ಅನಿರೀಕ್ಷಿತ ತಿರುವೇನಲ್ಲ. ಆಗೆಲ್ಲ ನನ್ನಿಂದ ಬರೆಯಿಸಿಕೊಳ್ಳುತ್ತಿದ್ದ ‘ನದಿ’ ಅಂಕಣ ಓದುಗರ ಮೆಚ್ಚುಗೆ ಪಡೆದು ಪ್ರಶಂಸೆ ಗಳಿಸಿತ್ತು ಎಂಬುದು ಸಹಜವಾಗಿಯೇ ಅಭಿಮಾನದ ಸಂಗತಿ. ಇದೀಗ ಈ ರೀತಿಯಲ್ಲಿ ಮತ್ತೆ ಅಂಥ ಬರವಣಿಗೆ ನನ್ನೊಳಗಿಂದ ಈಚೆ ಬಂದರೆ ಸಾರ್ಥಕ ಬಾವ ನನ್ನ ಪಾಲಿಗೆ. ಓರ್ವ ಬರಹಗಾರನಿಗೆ, ಪತ್ರಕರ್ತನಿಗೆ ಅದಕ್ಕಿಂತ ಖುಷಿ ಇನ್ನೇನಿದೆ ಹೇಳಿ?

‘ನದಿ’ ನನಗೆ ಇಷ್ಟದ ರೂಪಕ. ನಾನು ಹುಟ್ಟಿದ್ದು ಕೂಡ ಶರಾವತಿ ದಡದ ಪಕ್ಕದ ಕರ್ಕಿಕೋಡಿಯಲ್ಲೇ. ಶರಾವತಿ ನದಿ ಸಮುದ್ರ ಸೇರುವುದು ನಮ್ಮ ಮನೆ ಪಕ್ಕದಲ್ಲಿಯೇ. ಈಗ ಅದರ ತಿರುವು ಎಲ್ಲೆಲ್ಲೂ ಹರಡಿಕೊಂಡಿದೆ. ಯಾವುದೇ ನದಿ ಇರಲಿ, ಅದು ತನ್ನ ಇಕ್ಕೆಲಗಳಲ್ಲೂ ರಾಶಿ ರಾಶಿ ಜೀವರಾಶಿಯನ್ನು ಸಲಹುತ್ತದೆ. ನದಿ ಎಡಬಲ ದಂಡೆ ಹಸಿ ಹಸಿಯಾಗಿದ್ದರೆ ಮಾತ್ರ ಉಸಿರು ಹಸಿ ಹಸಿಯಾಗಿರುತ್ತದೆ. ಹರಿಯುವ ನದಿ ಚಲನಶೀಲತೆಯ ಧ್ವನಿ ಕೂಡ. ಅದಕ್ಕಾಗಿಯೇ ಭಾರತೀಯರು ನದಿಯನ್ನು ತಾಯಿ ಅಂತ ಕರೆದದ್ದು. ಬಹುಶಃ ಈ ಕಾರಣಕ್ಕಾಗಿಯೇ ನದಿ ನನ್ನನ್ನು ಸೆಳೆದದ್ದು, ಬೆಳೆಸಿದ್ದು.

ಲಕ್ಷಾಂತರ ವರ್ಷಗಳಿಂದ ಭೂಮಿಯಲ್ಲಿ ನೀರು ಜಿನುಗಲು ಆರಂಭವಾದ ಲಾಗಾಯ್ತಿನಿಂದ ನದಿಯ ಉಗಮವೂ ಆಗಿರುತ್ತದೆ. ಈ ಬಗ್ಗೆ ಇನ್ನು ಯಾವತ್ತಾದರೂ ಇದೇ ಜಾಗದಲ್ಲಿ ಚರ್ಚಿಸೋಣ ; ನದಿ ಹುಟ್ಟಿನ ಬಗ್ಗೆ ಚರ್ಚಿಸಲೇ ಬೇಕಾದ ವಿಷಯ. ನದಿ ಕುರಿತಂತೆ ವ್ಶೆಜ್ಞಾನಿಕ ಕಾರಣವನ್ನು ನಾವು ತಿಳಿದುಕೊಂಡಷ್ಟು ನಮಗೆ ಅದರ ಬಗ್ಗೆ ಕಾಳಜಿ ಜಾಸ್ತಿಯಾಗಬಹುದು.

ನನಗೆ ಬಾಲ್ಯದಿಂದಲೂ ಪತ್ರಿಕೆಗಳ ಬಗ್ಗೆ, ಅಲ್ಲಿ ಸುದ್ದಿ ಟಂಕಿಸುವ ಬಗ್ಗೆ, ಸುದ್ದಿ ಸಂಗ್ರಹಿಸುವ ಬಗ್ಗೆ,
ಪತ್ರಿಕೆಯನ್ನು ಊರೂರಿಗೆ ಹಂಚುವ ಬಗ್ಗೆ ಕುತೂಹಲವಿತ್ತು. ಕೊನೆಕೊನೆಗೆ ನಾನೂ ಪತ್ರಕರ್ತನಾಗಬೇಕೆಂಬ ಉತ್ಸಾಹದಲ್ಲಿ ‘ಕನ್ನಡಜನಾಂತರoಗ’ಕ್ಕೂ ವರದಿ ಮಾಡಲು ಸಂಪಾದಕ ಬಿ.ವಿ.ಸೀತಾರಾo ಅವಕಾಶ ಮಾಡಿಕೊಟ್ಟಿದ್ದರು. ಅನಂತರ ‘ಪ್ರಜಾವಾಣಿಗೂ ವರದಿ ಮಾಡಲು ಸಂಪಾದಕ
ಕೆ.ಎನ್.ಹರಿಕುಮಾರ್ ನೇಮಕ ಮಾಡಿಕೊಂಡರು. ಕೆಲ ವರ್ಷ ಕಳೆದ ಮೇಲೆ ನನ್ನದೇ ಸ್ವಂತ ಪತ್ರಿಕೆ
ಮಾಡಬೇಕೆನ್ನುವ ಉಮೇದಿಯಲ್ಲಿ ‘ಕನ್ನಡದ ಹಣತೆ’ ವಾರಪತ್ರಿಕೆಯನ್ನೂ ಆರಂಭಿಸಿದ್ದೆ. ಕೆಲವಾರು ವರ್ಷಗಳ ಇದರೊಂದಿಗೇ ಪ್ರಯಾಣಿಸಿದೆ. ಇದೀಗ ‘ಹಣತೆ ವಾಹಿನಿ’ ವೆಬ್ ನ್ಯೂಸ್ ಪೋರ್ಟಲ್ ನೊಂದಿಗೆ ನಿಮ್ಮೆದುರು
ನಿಂತಿದ್ದೇನೆ.

ಪತ್ರಿಕಾರoಗದಲ್ಲಿನ ನನ್ನ ಪ್ರಯಾಣದ ಬಗ್ಗೆ ಯಾಕೆ ಬರೆದೆ ಅಂದರೆ ಬದಲಾಗುತ್ತಿರುವ ಮಾಧ್ಯಮದ ಕಸು
ಮತ್ತು ಕಸುಬು ತುಂಬ ಕುತೂಹಲಕಾರಿ ಮತ್ತು ಚೇತೋಹಾರಿ. ‘ಕನ್ನಡ ಜನಾಂತರoಗ’ದ ಸಂದರ್ಭದಲ್ಲಿ
ನಾವೆಲ್ಲ ಸುದ್ದಿ ಬರೆದು ಸಂಪಾದಕರ ಕಚೇರಿಗೆ ಕಳುಹಿಸುತ್ತಿದ್ದೆವು. ವರದಿಗೆ ಸಂಬoಧಿಸಿದ ಫೋಟೊಗಳನ್ನೂ ಪ್ರಿಂಟ್ ಹಾಕಿಸಿಯೇ ಕೊಡಬೇಕಾಗಿತ್ತು. ಅತಿ ಜರೂರು ಫೋಟೋಗಳನ್ನು ತಕ್ಷಣ ಪ್ರಿಂಟ್ ಹಾಕಿಸುವುದು ಕೂಡ ಕಷ್ಟಸಾಧ್ಯವಾಗಿತ್ತು. ಅನಂತರ ನಾನು ‘ಪ್ರಜಾವಾಣಿ’ಗೆ ಆಯ್ಕೆ ಆದಾಗ ಸುದ್ದಿಗಳನ್ನು ಬರೆದು ಫ್ಯಾಕ್ಸ್ ಮಾಡಲು ಆರಂಭಿಸಿದೆವು. ‘ಪ್ರಜಾವಾಣಿ’ ನಮಗೆಲ್ಲ ಫ್ಯಾಕ್ಸ್ ಕಾರ್ಡ್ ನೀಡಿತ್ತು. ಅದನ್ನು
ದೂರವಾಣಿ ಇಲಾಖೆಗೆ ಹೋಗಿ ತೋರಿಸಿದರೆ ಉಚಿತವಾಗಿ ಸುದ್ದಿಯನ್ನು ಫ್ಯಾಕ್ಸ್ ಮಾಡಲು ಅವಕಾಶ
ಮಾಡಿಕೊಡುತ್ತಿದ್ದರು. ಅದರ ಹಣವನ್ನು ಇಲಾಖೆಗೆ ‘ಪ್ರಜಾವಾಣಿ’ಯೇ ಭರಿಸಿಕೊಳ್ಳುತ್ತಿತ್ತು. ವರದಿಗೆ ತುರ್ತಾಗಿ
ಫೋಟೊಗಳು ಬೇಕಾಗಿದ್ದರಂತೂ ನಾವು ಕ್ಯಾಮರಾದಲ್ಲಿ ಕ್ಲಿಕ್ ಮಾಡಿದ ಫೊಟೋ ಫಿಲ್ಮ್ಗಳನ್ನು ಭಟ್ಕಳ ಅಥವಾ ಕಾರವಾರಕ್ಕೆ ಬೈಕ್ ನಲ್ಲಿ ಹೋಗಿ ಪ್ರಿಂಟ್ ಹಾಕಿಸಿ ಕಳುಹಿಸಬೇಕಿತ್ತು. ಕ್ರಮೇಣ ಕಂಪ್ಯೂಟರ್‌ನಲ್ಲೇ ಸುದ್ದಿ ಬರೆದು, ಫೊಟೋವನ್ನೂ ಸ್ಕಾö್ಯನ್ ಮಾಡಿ ಕಳುಹಿಸುವ ವ್ಯವಸ್ಥೆ ಬಂದಾಗ ಕೊಂಚ ನಿರಾಳವಾಗಿತ್ತು. ಇವೆಲ್ಲ ನನ್ನೊಬ್ಬನ ಕಥೆಯಾಗಿರಲಿಲ್ಲ. ನನ್ನ ಸರೀಕ ಪತ್ರಕರ್ತರೆಲ್ಲರ ಗೋಳಾಗಿತ್ತು. ಒಂದು ಸುದ್ದಿ ಕಳುಹಿಸುವಾಗ ಹೈ ರಾಣಾಗಿಬಿಡುತ್ತಿದ್ದೆವು. ಅಂಥ ಪರಿಸ್ಥಿತಿಯಲ್ಲೂ ನಮ್ಮ ಪತ್ರಕರ್ತ ಗೆಳೆಯರ ನಡುವೆ ತಮ್ಮ ತಮ್ಮ ಪತ್ರಿಕೆಯಲ್ಲೇ ಸುದ್ದಿ ಮೊದಲು ಬರಬೇಕೆನ್ನುವ ಧಾವಂತ ಇದ್ದೇ ಇರುತ್ತಿತ್ತು.ಯಾರದೋ ಮಾಲಕತ್ವದ ಪತ್ರಿಕೆಯಾದರೂ ನಾವಿಲ್ಲಿನಮ್ಮದೇ ಪತ್ರಿಕೆ ಎನ್ನುವಂತೆ ಸಣ್ಣ ಗರ್ವದಿಂದಲೇ ಕೆಲಸ ಮಾಡುತ್ತಿದ್ದೆವು.. ಆದರೆ ಆಗೆಲ್ಲ ನಾವು ವರದಿಹಾರಿಕೆ ಮಾಡುವ ಖುಷಿ, ಉಮೇದಿ ಈಗೀಗ ಬರುತ್ತಿರುವ ಹೊಸ ಹುಡುಗರಲ್ಲಿ ಕಾಣಿಸುವುದು ಅಪರೂಪ. ಬಹುತೇಕರು ಕಟ್ ಎಂಡ್ ಪೇಸ್ಟ್ ಪತ್ರಕರ್ತರೇ ಜಾಸ್ತಿಯಾಗಿಬಿಟ್ಟಿದ್ದಾರೆ.
ಅಧ್ಯಯನಶೀಲತೆಯಂತೂ ಇಲ್ಲವೇ ಇಲ್ಲ. ಹಾಗಾಗಬಾರದು. ಪತ್ರಕರ್ತರು ಜಾಸ್ತಿ ಜಾಸ್ತಿ ಓದಿದಷ್ಟೂ ಹಿಗ್ಗುತ್ತಾರೆ,
ಮಾಗುತ್ತಾರೆ. ಕಂಪನಿ ಮಾಲಕತ್ವದ ಪತ್ರಿಕೆ ಬಿಟ್ಟು ನನ್ನದೇಸಂಪಾದಕತ್ವದಲ್ಲಿ ‘ಕನ್ನಡದ ಹಣತೆ’ ವಾರಪತ್ರಿಕೆ
ಆರಂಭಿಸಿದ್ದoತೂ ತುಂಬ ರೋಚಕ. ಮೊದಲುಕುಮಟಾದಲ್ಲಿ, ಅನಂತರ ಕಾರವಾರದಲ್ಲಿ ಪತ್ರಿಕೆ ಪ್ರಿಂಟ್
ಆಗುತ್ತಿತ್ತು. ಕುಮಟಾದ ನಿಖಿಲ್ ಪ್ರೆಸ್‌ನಲ್ಲಿ ರಾತ್ರಿ ಒಂದು ಗoಟೆಗೆ ಪ್ರಿಂಟ್ ಹಾಕಿಸಿ ಬೈಕ್ ನಲ್ಲಿ ಪತ್ರಿಕೆ ಹೇರಿಕೊಂಡು
ಹಳದೀಪುರದ ಮನೆಗೆ ಹೋದರೆ,ಬೆಳಗಾಗುವುದರೊಳಗೆ ಚಂದಾದಾರರಿಗೆ ಕಳುಹಿಸಲುಸ್ಟಾಂಪ್ ಮತ್ತು ವಿಳಾಸ ಅಂಟಿಸಿ ಅಂಚೆಗೆ ಹಾಕಬೇಕಿತ್ತು.ಜೊತೆ ಜೊತೆಗೆ ಎಲ್ಲ ತಾಲೂಕು ಏಜೆಂಟರಿಗೂ ಬಸ್
ಮೂಲಕವೋ, ಟೆಂಪೋ ಮೂಲಕವೋ ಪತ್ರಿಕೆಯ ಬಂಡಲ್ ಕಳುಹಿಸಬೇಕಾಗಿತ್ತು. ಈ ವೇಗ, ಓಘ ಸಣ್ಣ ಪತ್ರಿಕೆಯ ಸಂಪಾದಕನಿಗೆ ಮಾತ್ರ ಪ್ರೀತಿ. ಮೊದಲು ಕಪ್ಪು ಬಿಳುಪಿನಲ್ಲಿ ಆಪ್ ಸೆಟ್ ಪ್ರಿಂಟ್‌ನಲ್ಲಿ ಬರುತ್ತಿದ್ದಪತ್ರಿಕೆ, ಕೊನೆಗೆ ಬಣ್ಣದಲ್ಲಿ ಮಲ್ಟಿ ಕಲರ್ ಆಪಸೆಟ್‌ನಲ್ಲಿಮುದ್ರಣವಾಗತೊಡಗಿತು. ಇದು ನನ್ನ ‘ಕನ್ನಡದ ಹಣತೆ’ವಾರಪತ್ರಿಕೆ ಸಾಗಿಬಂದ ಮುದ್ದಾದ ಕಥೆ. ಮುದ್ದು ಯಾಕೆಅಂದರೆ ಒಂದು ಪತ್ರಿಕೆ ನಡೆಸುವಾಗಿನ ಕಷ್ಟ-ನಷ್ಟ,
ನೋವು-ಬೇವು ಇವೆಲ್ಲವೂ ತಾಯಿಗೆ ಮಗು ಹಡೆದ ಪ್ರಸವ ವೇದನೆ. ಈ ಹಿಂದೆ ಹಾಳೆಗಳಲ್ಲಿ ‘ಕನ್ನಡದ ಹಣತೆ’ಯನ್ನು ನೋಡುತ್ತಿದ್ದ ನೀವು ಇದೀಗ ಪರದೆಯಲ್ಲಿ ‘ಹಣತೆ ವಾಹಿನಿ’

ನೋಡುತ್ತಿದ್ದೀರಿ. ನಿಜ, ಡಿಜಿಟಲ್ ಮಾಧ್ಯಮ ಇಂದು ಕ್ಷಣ ಮಾತ್ರದಲ್ಲಿ ಜಗತ್ತನ್ನು ವ್ಯಾಪಿಸಿಕೊಳ್ಳುವ ಶಕ್ತಿ ಹೊಂದಿದೆ. ಆದರೆ ಅದನ್ನು ಬಳಸಿಕೊಳ್ಳುವಲ್ಲಿ ನಾವು ಸಾಮಾಜಿಕ ಜವಾಬ್ದಾರಿ ಮತ್ತು ಬದ್ಧತೆಯನ್ನು ಮರೆತರೆ ನಮ್ಮ ಗೋರಿ ನಾವೇ ತೋಡಿಕೊಂಡoತೆ ಎಂಬುದನೆಯಬಾರದು. ಅoದು ಪೆನ್ನು, ಫ್ಯಾಕ್ಸ್ ಅನ್ನುತ್ತ ವರದಿಗಾರಿಕೆ ಮಾಡಿದ ನಾನು ಅನಂತರ ಕಂಪ್ಯೂಟರ್, ಸ್ಕಾö್ಯನ್, ಇ-ಮೇಲ್ ಅಂತ ಪಯಣಿಸಿದ್ದು ಆಯ್ತು. ಇದೀಗ ಮೊಬೈಲ್, ಮೆಮರಿ ಚಿಪ್, ವೆಬ್ಸೈಟ್, ಗ್ರಾಫಿಕಲ್ ಡಿಸೈನ್, ಗೂಗಲ್, ಬ್ರಾಡ್ ಕಾಸ್ಟ್ ಗ್ರೂಪ್, ವಾಟ್ಸಾಪ್ ಚೆನಲ್ ಅನ್ನುತ್ತ ಕ್ಷಣ ಮಾತ್ರದಲ್ಲಿ ಲಕ್ಷಾಂತರ ಜನ ತಲುಪಲು ಬರುತ್ತಿದ್ದೇನೆ ನದಿಯಂತೆ.ಇಪ್ಪತ್ತು ವರ್ಷಗಳ ಹಿಂದೆ ಹೊನ್ನಾವರದ ಶರಾವತಿನದಿ ದಡದಲ್ಲಿ ಗಾಳಿಮರಗಳ ನಡುವೆ ಹಚ್ಚಿಕೊಂಡ ‘ಹಣತೆ’ ಸಾಹಿತ್ಯಿಕ, ಸಾಂಸ್ಕೃತಿಕ ಜಗಲಿಯನ್ನು ಹಣತೆ ಬೆಳಗಿ ಉದ್ಘಾಟಿಸಿದವರು ಹಿರಿಯ ಸಾಹಿತಿಗಳಾದ ವಿ.ಗ.ನಾಯಕ, ಬಿ.ಟಿ.ಲಲಿತಾ ನಾಯಕ್, ಕಾ.ತ.ಚಿಕ್ಕಣ್ಣ. ಅಬ್ದುಲ್ ರಶೀದ್, ವಿವೇಕ್ ಶಾನಬಾಗ್, ಜಿ.ಪಿ.ಬಸವರಾಜು, ಬಿ.ಗಣಪತಿ, ರೋಹಿದಾಸ ನಾಯಕ್ಮುಂತಾದವರು. ಗೆಳೆಯ ವೆಂಕಟೇಶ ಮೇಸ್ತಜೊತೆಗೆ ನಿಂತಿದ್ದ. ಅನಂತರ ಅದೇ ‘ಹಣತೆ’ ಹೆಸರನ್ನು
ನನ್ನ ವಾರಪತ್ರಿಕೆಗೆ ಮತ್ತು ಇದೀಗ ವೆಬ್ ನ್ಯೂಸ್ ಪೋರ್ಟಲ್‌ಗೆ ಬಳಸಿಕೊಳ್ಳುತ್ತಿದ್ದೇನೆ. ‘ಕನ್ನಡ ವಾಹಿನಿ’ ವೆಬ್ ನ್ಯೂಸ್ ಪೋರ್ಟಲ್ ಬರುತ್ತಿರುವ ಸಂಗತಿಯನ್ನು ಇವತ್ತಿನ ವಾಟ್ಸಾಪ್‌ನ ವಿವಿಧ ರೂಪಗಳು
ಜಗತ್ತಿನ ಲಕ್ಷಾಂತರ ಜನರನ್ನು ತಲುಪಿಸಿವೆ. ನಿನ್ನೆಯಿಂದ ಬೇರೆ ಜಿಲ್ಲೆಗಳು, ಬೇರೆ ಬೇರೆ ರಾಜ್ಯಗಳು, ಬೇರೆ ಬೇರೆ
ದೇಶಗಳಿಂದ ಶುಭಾಶಯಗಳು ನನಗೆ ಬರುತ್ತಲೇ ಇವೆ. ಎಲ್ಲರ ಪ್ರೀತಿಯನ್ನು ಅನುಭವಿಸಿದ್ದೇನೆ.
ಅಭಿಮಾನದಿಂದ ಸ್ಪಂದಿಸಿದ ಎಲ್ಲರಿಗೂ ಕೃತಜ್ಞತೆಗಳು.

‘ಹಣತೆ ವಾಹಿನಿ’ ಮೊದಲ ಸಂಚಿಕೆ ಹೀಗೆ ಬಂದಿದೆ. ಮುಂದಿನ ಸoಚಿಕೆಗಳಲ್ಲಿ ಇನ್ನೂ ಬದಲಾವಣೆಯನ್ನು ನೀವೆಲ್ಲ
ನೋಡುತ್ತೀರಿ. ನಾಡಿನ ಖ್ಯಾತ ನಾಮ ಬರಹಗಾರರು, ಪತ್ರಕರ್ತರೆಲ್ಲ ಬರೆಯುತ್ತಾರೆ. ಪ್ರತಿ ಬಾನುವಾರ ಹೊಸ
ಹೊಸ ಸಂಚಿಕೆ ನಿಮ್ಮ ಬೆರಳ ತುದಿಯಲ್ಲಿ ಇರುತ್ತದೆ. ತೀರಾಮಹತ್ವದ ಸುದ್ದಿಗಳು ನಿತ್ಯ ನಿತ್ಯವೂ ನಿಮ್ಮನ್ನು
ತಲುಪುವ ವ್ಯವಸ್ಥೆ ಮಾಡಲಾಗುವುದು. ಇವಿಷ್ಟು ಈ ಕ್ಷಣಕ್ಕೆ ಅನಿಸಿದ್ದು. ,ಮತ್ತು ಮುಂದಿನ ವಾರದ ‘ನದಿ’
ಅಂಕಣದಲ್ಲಿ ಬೇಟಿಯಾಗುತ್ತೇನೆ.

ಓದುಗರ ಗಮನಕ್ಕೆ :
‘ಹಣತೆ ವಾಹಿನಿ’ ಮುಂದಿನ ಸಂಚಿಕೆಯಿoದ ಇನ್ನಷ್ಟು
ಬದಲಾವಣೆಯೊಂದಿಗೆ, ಮತ್ತಷ್ಟು ಅಂಕಣಗಳೊoದಿಗೆ
ನಿಮ್ಮೆದುರು ಬರಲಿದೆ.

ಬರಹಗಾರರ ಗಮನಕ್ಕೆ :
‘ಹಣತೆ ವಾಹಿನಿ’ ಬಗ್ಗೆ ಪ್ರತಿಕ್ರಿಯಿಸುವವರು ಮುಂದೆ
ನೀಡಲಾಗಿರುವ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.
– ಸಂಪಾದಕ

Arvind karkikodi

ಲೇಖಕರು
ಅರವಿಂದ ಕರ್ಕಿಕೋಡಿ
ಪ್ರಧಾನ ಸಂಪಾದಕರು
ಹಣತೆವಾಹಿನಿ

2 thoughts on “‘ಕನ್ನಡದ ಹಣತೆ’ಯಿಂದ ‘ಹಣತೆ ವಾಹಿನಿ’ಗೆ ಹರಿದು ಬರುತ್ತಿರುವ ‘ನದಿ’

  1. ಅಭಿನಂದನೆಗಳು ಸರ್. ನೀವು ಹೆಚ್ಚಿನ ಹಣತೆ ನಂದಾದೀಪವಾಗಿ ಸದಾ ಬೆಳಗಲಿ…

    1. ತುಂಬಾ ಸುಂದರವಾಗಿ ಮೂಡಿ ಬಂದಿದೆ ಈ ದಿನದ ಶುಭ ಸಂಜೆಯಲ್ಲಿ ದೀಪದಂತೆ ಪ್ರಾರಂಭವಾದ ಈ ಹಣತೆ ವಾಹಿನಿ ಎಣ್ಣೆ ಖಾಲಿಯಾಗದಂತೆ ಯಾವಾಗಲೂ ನಂದಾದೀಪವಾಗಿ ಬೆಳಗಲಿ

Leave a Reply

Your email address will not be published. Required fields are marked *