ಕರ್ನಾಟಕ ಮೊನ್ನೆ ಮೊನ್ನೆಯಷ್ಟೇ ಕನ್ನಡ ರಾಜ್ಯೋತ್ಸವವನ್ನು ಸಡಗರದಿಂದ ಆಚರಿಸಿಕೊಂಡಿದೆ, ಇಡೀ ವರ್ಷ ಆಚರಿಸುವ ಬಗ್ಗೆ ಸರಕಾರ ತೀರ್ಮಾನಿಸಿದೆ. ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ನಿಕ್ಕಿಯಾಗಿ ಐವತ್ತು ವರ್ಷಗಳಾದ ಹಿನ್ನೆಲೆಯಲ್ಲಿ ೨೦೨೪ ನವೆಂಬರ್ ೧ ರವರೆಗೂ ‘ಹೆಸರಾಯಿತು ಕರ್ನಾಟಕ, ಉಸಿರಾಲಿ ಕನ್ನಡ’ ಎಂಬ ಹೆಸರಿನಲ್ಲಿ ‘ಕರ್ನಾಟಕ ಸಂಭ್ರಮ’ ಆಚರಿಸಬೇಕು ಎಂದು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ನವೆಂಬರ್ ಬಂದಾಗಲೇ ಕನ್ನಡ ಶ್ರದ್ಧೆಯ ಮಾತನಾಡುವುದು ಕನ್ನಡಿಗರೆಲ್ಲರ ಚಾಳಿ ಎಂಬುದನ್ನು ಮತ್ತೆ ಹೇಳಬೇಕಾಗಿಲ್ಲ. ಏನೇ ಆದರೂ ಸರಕಾರ ಮಹಾತ್ವಾಕಾಂಕ್ಷೆಯಿಂದ ಹೇಳಿಕೊಂಡ ‘ಕರ್ನಾಟಕ ಸಂಭ್ರಮ’ ಪರಿಣಾಮಕಾರಿಯಾಗಿ ಮೂಡಿಬರಲಿ ಎಂಬುದು ಇಲ್ಲಿನ ಆಶಯ.
೨೦೨೦ ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನವೆಂಬರ್ ೧ರಿಂದ ೨೦೨೧ ಅಕ್ಟೋಬರ್ ವರೆಗಿನ ಅವಧಿಯನ್ನು ‘ಕನ್ನಡ ಕಾಯಕ ವರ್ಷ’ವನ್ನಾಗಿ ಘೋಷಿಸಿದ್ದರು. ೨೦೨೨ ರಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದಾಗ ಕನ್ನಡ ರಾಜ್ಯೋತ್ಸವ ಬಾಷಣ ಮಾಡುತ್ತ ಕನ್ನಡಕ್ಕೆ ಕಾನೂನಿನ ರಕ್ಷಾ ಕವಚ ನೀಡುತ್ತೇವೆ ಎಂದು ಏರಿದ ಧ್ವನಿಯಲ್ಲಿ ಹೇಳಿದರು. ಆದರೆ ಇಂಥ ಘೋಷಣೆಗಳು ಕ್ರಿಯಾಯೋಜನೆಯ ರೂಪ ತಾಳಿ ನವೆಂಬರ್ ನಂತರವೂ ಎಷ್ಟರ ಮಟ್ಟಿಗೆ ಮುಂದುವರೆಯುತ್ತವೆ ಎಂಬುದೇ ಪ್ರಶ್ನಾರ್ಥಕವಾಗಿ ನಿಲ್ಲುತ್ತವೆ. ಪ್ರತಿ ರಾಜ್ಯೋತ್ಸವ ಸಂದರ್ಭದಲ್ಲೂ ಸರಕಾರ ವತಿಯಿಂದ ‘ಕನ್ನಡ ಕಟ್ಟುವ’ ಸಲುವಾಗಿ ಭಾವಾವೇಶದ ಮಾತುಗಳು ಹೊರಬೀಳುವುದು ಸಂಪ್ರದಾಯವೇ ಆಗಿದೆ. ಆ ಮಾತುಗಳೆಲ್ಲ ಕಾರ್ಯರೂಪಕ್ಕೆ ಬಂದಿದ್ದರೆ, ಈಗ ‘ಕನ್ನಡ ಕಾಯಕ ವರ್ಷ’ದ ಘೋಷಣೆಯ ಅಗತ್ಯವೇ ಇರುತ್ತಿರಲಿಲ್ಲ. ಈ ವಿರೋಧಾಭಾಸವು ಯಡಿಯೂರಪ್ಪನವರಿಗೂ, ಬಸವರಾಜ ಬೊಮ್ಮಾಯಿಯವರಿಗೂ, ಇದೀಗ ಸಿದ್ದರಾಮಯ್ಯ ಅವರಿಗೂ ತಿಳಿದೇ ಇದೆ.
ಕೊರೋನಾ ನಿಯಂತ್ರಣಕ್ಕಾಗಿ ಹೇರಲಾಗಿದ್ದ ಲಾಕ್ ಡೌನ್ ಅವಧಿಯಲ್ಲಿ ಸರ್ಕಾರಿ ಶಾಲೆಗಳು ಮತ್ತೆ ಜನರ ಗಮನ ಸೆಳೆದಿವೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಖಾಸಗಿ ಶಾಲೆಗಳನ್ನು ಭರಿಸಲಾಗದ ಹಲವು ಪೋಷಕರು ಸರ್ಕಾರಿ ವ್ಯವಸ್ಥೆಯತ್ತ ಮುಖ ಮಾಡಿರುವುದು ಸಹಜ. ಈ ಸಂದರ್ಭವನ್ನು ಸರ್ಕಾರಿ ಶಾಲೆಗಳನ್ನು ಬಲ ಪಡಿಸುವುದಕ್ಕೆ ಈ ಎಲ್ಲರ ಸರಕಾರಗಳು ಬಳಸಿಕೊಳ್ಳಬಹುದಿತ್ತು. ಆ ಕೆಲಸವನ್ನು ಯಾವ ಸರ್ಕಾರಗಳೂ ಮಾಡಲೇ ಇಲ್ಲ. ವಿದ್ಯಾರ್ಥಿಗಳ ಕೊರತೆಯೊಡ್ಡಿ ಸರ್ಕಾರಿ ಶಾಲಾ ವ್ಯವಸ್ಥೆಯು ಸ್ವಯಂ ದುರ್ಬಲಗೊಳ್ಳಲು ನಮ್ಮ ಸರಕಾರವೇ ಇತ್ತೀಚಿನ ವರ್ಷಗಳಲ್ಲಿ ಅವಕಾಶ ಮಾಡಿಕೊಟ್ಟಿದೆ. ಈ ಮನೋಬಾವದಿಂದ ಹೊರಬಂದು ಕನ್ನಡ ಶಾಲೆಗಳಿಗೆ ಅಗತ್ಯವಾದ ಎಲ್ಲ ಮೂಲ ಸೌಕರ್ಯವನ್ನು ಸರಕಾರ ಮೊದಲು ಒದಗಿಸಬೇಕು. ಶಿಕ್ಷಕರ ಹೆಗಲ ಮೇಲಿನ ಜವಾಬಾರಿಗಳನ್ನು ಹಗುರಗೊಳಿಸಿ ಅವರನ್ನು ಪೂರ್ಣ ಪ್ರಮಾಣದಲ್ಲಿ ಪಾಠ ಮಾಡಲು ಬಿಡಬೇಕು. ಇನ್ನೂ ಏನೆಚಿದರೆ ಪ್ರತಿ ತರಗತಿಗೆ ಒಂದು ಶಿಕ್ಷಕರು ಇರುವಂತೆ ಸರಕಾರ ಕ್ರಮ ಕೈಗೊಳ್ಳಲೇ ಬೇಕು. ಕನ್ನಡ ಶಾಲೆಗಳನ್ನು ಅವುಗಳ ಪಾಡಿಗೆ ಬಿಟ್ಟು ಕನ್ನಡ ಸಶಕ್ತಗೊಳಿಸುವುದು ಕಷ್ಟಸಾಧ್ಯವಾದುದರಿಂದ, ಇದೀಗ ಸರಕಾರ ಘೋಷಿಸಿದ ‘ಕರ್ನಾಟಕ ಸಂಭ್ರಮ’ ವರ್ಷದಲ್ಲಾದರೂ ಸರಕಾರಿ ಶಾಲೆಗಳಿಗೆ ಆದ್ಯತೆ ದೊರೆಯಬೇಕು. ಅಷ್ಟೇ ಅಲ್ಲ, ‘ಸಾಂಸ್ಕೃತಿಕ ನೀತಿ’ ಜಾರಿಯತ್ತಲೂ ಗಮನ ಹರಿಸಬೇಕು. ಬರಗೂರು ರಾಮಚಂದ್ರಪ್ಪನವರು ಸಿದ್ಧಪಡಿಸಿದ್ದ ಸಾಂಸ್ಕೃತಿಕ ನೀತಿ ವರದಿಯನ್ನು ಜಾರಿಗೊಳಿಸುವಂತೆ ೧೯೧೭ರ ಅಕ್ಟೋಬರ್ ನಲ್ಲಿಯೇ ಸರ್ಕಾರ ಸೂಚಿಸಿದ್ದರೂ ಇದುವರೆಗೂ ಅದು ಜಾರಿಯಾಗಿಲ್ಲ. ಮತ್ತಷ್ಟು ಬಿಳಂಬ ಮಾಡದೇ ಸರಕಾರ ಸಾಂಸ್ಕೃತಿಕ ನೀತಿಯನ್ನು ಕಾರ್ಯರೂಪಕ್ಕೆ ತರಬೇಕು. ಇದರಿಂದಾಗಿ ಸರಕಾರ ಬದಲಾದಂತೆ ವಿವಿಧ ಅಕಾಡೆಮಿ ಹಾಗೂ ಪ್ರಾಧಿಕಾರಗಳ ಪದಾಧಿಕಾರಿಗಳು ಬದಲಾಗುವುದು ತಪ್ಪುತ್ತದೆ. ಅಕಾಡೆಮಿ-ಪ್ರಾಧಿಕಾರಗಳಿಗೆ ನೀಡುವ ಅನುದಾನವನ್ನು ೨೦೨೦-೨೧ನೇ ಸಾಲಿನಲ್ಲಿ ಸರ್ಕಾರ ಕಡಿತಗೊಳಿಸಿದೆ. ಅನುದಾನದ ಕೊರತೆಯಿಂದಾಗಿ ಕೆಲವು ಪ್ರಶಸ್ತಿಗಳನ್ನು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನಿಡುವ ವಿದ್ಯಾರ್ಥಿ ವೇತನವನ್ನು ನಿಲ್ಲಿಸುವುದಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎರಡು ವರ್ಷಗಳ ಹಿಂದೆಯೇ ಹೇಳಿತ್ತು. ಕನ್ನಡದ ಹಿತಾಸಕ್ತಿಗೆ ಅಪಾಯಕಾರಿಯಾದ ಇಂಥ ಚೌಕಾಸಿ ಮತ್ತು ರಾಜಿಗಳಿಂದ ಸರ್ಕಾರ ಹೊರಬರಬೇಕು. ರಾಷ್ಟç ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವುದು ಸೇರಿದಂರೆ, ಹೆಚ್ಚಿನ ಉದ್ಯೋಗಾವಕಾಶಗಳು ಕನ್ನಡಿಗರಿಗೆ ದೊರೆಯುವ ದಿಸೆಯಲ್ಲಿ ಕ್ರಿಯಾಯೋಜನೆಯೊಂದನ್ನು ರೂಪಿಸಬೇಕಾಗಿದೆ. ಕರ್ನಾಟಕ-ಕನ್ನಡ ಕಟ್ಟುವ ಕೆಲಸದಲ್ಲಿ ಸ್ವಯಂ ಪ್ರೇರಣೆಯಿಂದ ತೊಡಗಿಕೊಂಡಿರುವ ಉದ್ಯಮ ಸಂಸ್ಥೆಗಳ ನೆರವನ್ನು ಪಡೆಯುವುದು ಸಾಧ್ಯವಾದಲ್ಲಿ ಮಾತ್ರ ‘ಕರ್ನಾಟಕ ಸಂಭ್ರಮ’ ಮತ್ತಷ್ಟು ಪರಿಣಾಮಕಾರಿ ಆಗಬಲ್ಲದು. ಅದಾಗದಿದ್ದರೆ ಕನ್ನಡದ ಸಂಕಟ ಮುಂದುವರಿಯುತ್ತದೆ.